ಈದುಲ್ ಫಿತ್ರ್ ಸಂಭ್ರಮದಲ್ಲಿ ಬಡವರನ್ನು ಮರೆಯದಿರೋಣ

No comments

ಕೆ.ಎಂ ಇಸ್ಮಾಯಿಲ್ ಕಂಡಕರೆ
ರಮಾಜಾನ್ ತಿಂಗಳ ಉಪವಾಸ ಮಾಡಿದವರು ನಾವು, ದಾನ ಧರ್ಮ ಎಲ್ಲಾ ಸತ್ಕರ್ಮಗಳನ್ನು ಮಾಡಿ ದೇವನೊಡನೆ ಕಣ್ಣೀರಿನಿಂದ ನಮ್ಮ ಪಾಪವನ್ನು ಕ್ಷಮಿಸಲು ಪ್ರಾರ್ಥನೆ ಮಾಡಿದವರು. ಬಡವ ,ಶ್ರೀಮಂತ ಎನ್ನದೆ ಎಲ್ಲರೂ ರಮಳಾನ್ ತಿಂಗಳಲ್ಲಿ ಭಯ, ಭಕ್ತಿಯಿಂದ ವ್ರತಾಚರಣೆ ಮಾಡಿರುವವರು. ನಮ್ಮ ಬಹುತೇಕ ಅಕ್ಕ-ಮನೆಗಳಲ್ಲಿ ಎಲ್ಲರೂ ರಂಜಾನ್ ಹಬ್ಬವನ್ನು ಆಚರಣೆ ಮಾಡುತ್ತಿದ್ದಾರ? ಎಂಬುದನ್ನು ನಾವು ಒಮ್ಮೆ ನೋಡಬೇಕಿದೆ. ನಾವು ಇಲ್ಲಿ ಸಂಭ್ರಮ ಸಡಗರದಿಂದ ಹಬ್ಬವನ್ನು ಆಚರಣೆ ಮಾಡುವಾಗ ಹಲವಾರು ಮನೆಗಳಲ್ಲಿ ಈದುಲ್ ಫಿತರ್ ದಿನದ ಒಂದು ಹೊತ್ತಿನ ಊಟಕ್ಕೂ ಪರಿತಪಿಸುವವರು ನಮ್ಮ ಸುತ್ತಮುತ್ತಲು ಜೀವನ ನಡೆಸುತ್ತಿದ್ದಾರೆ. ಈ ಈದುಲ್ ಫಿತ್ರ್ ನಲ್ಲಿ ನಾವು ನಮ್ಮ ಹಬ್ಬದ ಸಂಭ್ರಮದಲ್ಲಿ ಬಡವರನ್ನು ಮರೆಯದೇ , ನಮ್ಮ ಸಂತೋಶದಲ್ಲಿ ಅವರನ್ನೂ ಕೂಡ ಸೇರಿಸಿ ಹಬ್ಬವನ್ನು ಆಚರಿಸೋಣ. ರಂಜಾನ್‌ ತಿಂಗಳ ಸಮಾಪ್ತಿಯೊಂದಿಗೆ ಹಬ್ಬವೇ ‘ಈದುಲ್ ಫಿತ್ರ್‌’. ರಂಜಾನ್‌ ಮಾಸದ ಚಂದ್ರದರ್ಶನದೊಂದಿಗೆ ಆರಂಭವಾಗುವ ಉಪವಾಸವು ಶವ್ವಾಲ್‌ ತಿಂಗಳ ಚಂದ್ರ ದರ್ಶನದೊಂದಿಗೆ ಕೊನೆಗೊಳ್ಳುತ್ತದೆ. ಶವ್ವಾಲ್‌ ತಿಂಗಳ ಮೊದಲ ದಿನ ಈದ್‌ ಉಲ್‌ ಫಿತ್ರ್‌ ಹಬ್ಬದ ಸಂಭ್ರಮ. ರಂಜಾನ್‌ ತಿಂಗಳ 30 ದಿನಗಳನ್ನು ಉಪವಾಸ, ಪ್ರಾರ್ಥನೆ, ಅಧ್ಯಾತ್ಮದಲ್ಲೇ ಕಳೆದು ಕೊನೆಯಲ್ಲಿ ಮುಸ್ಲಿಮರು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವರು. ಹಬ್ಬದ ದಿನ ಬೆಳಿಗ್ಗೆ ಮಸೀದಿ ಅಥವಾ ಈದ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಲಿದೆ. ಈದ್‌ ನಮಾಜ್‌ನ ಬಳಿಕ ‘ಖುತ್ಬಾ’ ಪ್ರವಚನ

ಇರಲಿದೆ. ಹಬ್ಬದ ದಿನ ಪಾಲಿಸಬೇಕಾದ ಶಿಷ್ಟಾಚಾರಗಳನ್ನು ನೆನಪಿಸಲಾಗುತ್ತದೆ. ಅದರ ನಂತರ ಪರಸ್ಪರ ಹಸ್ತಲಾಘವ ಮಾಡಿಕೊಂಡು, ತಬ್ಬಿಕೊಂಡು ಈದ್‌ ಶುಭಾಶಯಗಳನ್ನು ವಿನಿಮಯ ಮಾಡುತ್ತಾರೆ. ಈದ್ ಹಬ್ಬ ಪರಸ್ಪರ ಸಂಬಂಧ, ಬಾಂಧವ್ಯವನ್ನು ಬಲಪಡಿಸುವ ದಿನವಾಗಿದೆ. ಆದ್ದರಿಂದ ಪ್ರಾರ್ಥನೆಯ ಬಳಿಕ ಸಂಬಂಧಿಕರ, ಗೆಳೆಯರ ಮನೆಗೆ ಭೇಟಿ ನೀಡುವರು. ಹಬ್ಬದ ದಿನ ಮನೆಯಲ್ಲಿ ವಿಶೇಷ ಖಾದ್ಯಗಳನ್ನು ಸಿದ್ಧಪಡಿಸುವರು. ಈದುಲ್ ಫಿತ್ರ್ ಹಬ್ಬಕ್ಕೆ ಇಸ್ಲಾಮಿನಲ್ಲಿ ಮಹತ್ತರವಾದ ಸ್ಥಾನಮಾನವನ್ನು ಕಲ್ಪಿಸಲಾಗಿದೆ. ಆ ದಿನದ ಪ್ರಾರ್ಥನೆಗೆ ವಿಶೇಷ ಮನ್ನಣೆಯನ್ನು ಅಲ್ಲಾಹು ನೀಡುತ್ತಾನೆ. ದೈವಭಕ್ತಿಯಿಂದ ಆ ದಿವಸ ಅಲ್ಲಾಹನೊಂದಿಗೆ ಯಾಚಿಸಿದರೆ ನಿಸ್ಸಂಶಯ ಅದು ದೊರೆಯದಿರಲಾರದು. ಆ ದಿವಸದಲ್ಲಿ ಉಪವಾಸ ಆಚರಣೆ ನಿಷಿದ್ದಗೊಳಿಸಲಾಗಿದೆ. ಅನ್ನಾಹಾರ ಪಾನೀಯ ಸೇವಿಸಿ ಪರಸ್ಪರ ಧಾರ್ಮಿಕ ಚೌಕಟ್ಟಿನಲ್ಲಿ ಸಂತೋಷ ಆಚರಣೆಗೆ ಇಸ್ಲಾಂ ಕಲ್ಪಿಸುತ್ತದೆ. ಇಸ್ಲಾಮಿನಲ್ಲಿ ಹಬ್ಬಗಳ ಆಚರಣೆಗೂ ಒಂದು ಮಿತಿಯಿದೆ. ಅವುಗಳನ್ನು ಪಾಶ್ಚಾತ್ಯ ಆಚರಣೆಗಳೊಂದಿಗೆ ಸಮೀಕರಿಸುವುದನ್ನು ಇಸ್ಲಾಂ ಯಾವತ್ತೂ ಒಪ್ಪುವುದಿಲ್ಲ. ಸಂಭ್ರಮದ ಹಬ್ಬಗಳ ಆಚರಣೆಯಲ್ಲೂ ಸೃಷ್ಟಿಕರ್ತನಾದ ಅಲ್ಲಾಹನ ಸ್ಮರಣೆಯನ್ನು ಅಧಿಕಗೊಳಿಸಲು ಇಸ್ಲಾಂ ಕಲ್ಪಿಸುತ್ತದೆ. ಹಬ್ಬಗಳ ಹೆಸರಿನಲ್ಲಿ ಒಂದು ಕ್ಷಣ ಕೈಗೊಳ್ಳುವ ಅನಿಸ್ಲಾಮಿಕ ಸಂಭ್ರಮಾಚರಣೆ ಮುಸಲ್ಮಾನನೊಬ್ಬನ ಜೀವಮಾನವಿಡೀ ಸಂಪಾದಿಸಿದ ಸತ್ಕರ್ಮಗಳ ವಿನಾಶಕ್ಕೆ ಹೇತುವಾಗುವ ಸಾಧ್ಯತೆಗಳಿರುವುದನ್ನು ಇಸ್ಲಾಂ ಗಂಭೀರವಾಗಿ ಎಚ್ಚರಿಸುತ್ತದೆ. ಹಬ್ಬದ ದಿನ ಮುಸ್ಲಿಂ ವ್ಯಕ್ತಿ ತನ್ನ ಸಂತೋಷದ ಜೊತೆಗೆ ಕುಟುಂಬಸ್ಥರ, ನೆರೆಕರೆಯವರ ಹಾಗೂ ಸಮುದಾಯದ ನೊಂದವರ ಪಾಲಿಗೂ ಸಂತೋಷವನ್ನು ನೀಡುವುದು ಪುಣ್ಯದಾಯಕವಾಗಿದೆ. ಈ ಕಾರಣಕ್ಕಾಗಿಯೇ ಸಂಪತ್ತಿನ ಕೇಂದ್ರೀಕರಣ ತಪ್ಪಿಸಿ ಬಡವರ ಪಾಲಿಗೂ ಅದು ದೊರಕುವಂತಾಗಲು ಅಲ್ಲಾಹನು ಝಕಾತ್ ಎಂಬ ಕರ್ಮವನ್ನು ಕಡ್ಡಾಯಗೊಳಿಸಿರುವುದು. ಈ ಪೈಕಿ ಅತ್ಯಂತ ಮಹತ್ವಪೂರ್ಣವಾದ ಒಂದು ಕರ್ಮವಾಗಿದೆ ಫಿತ್ರ್ ಝಕಾತ್. ಇದು ಈದುಲ್ ಫಿತ್ರ್ ದಿನದಂದು ಬಡವರ ಪಾಲಿಗೂ ಅನ್ನಾಹಾರದ ಕೊರತೆ ಕಂಡು ಬಾರದಂತೆ ಮಾಡಲು ಮಹತ್ವದ ಸ್ಥಾನವನ್ನು ಪಡೆದಿದೆ. ಉಪವಾಸಿಗರ ಉಪವಾಸದ ಪೂರ್ಣತೆಗೆ ಫಿತ್ರ್ ಝಕಾತ್ ನೀಡುವುದು ಅಗತ್ಯ ಕೂಡಾ. ಫಿತ್ರ್ ಝಕಾತ್‍ಗೆ ಹಲವು ನಾಮಗಳಿವೆ. ಝಕಾತುಲ್ ಬದನ್, ಝಕಾತುಲ್ ರಮಳಾನ್, ಝಕಾತುಸ್ಸೌಮ್ ಹೀಗೆ ಅನೇಕ ಹೆಸರುಗಳನ್ನು ಕಾಣಬಹುದು. ಇದರ ಮಹತ್ವವನ್ನು ತಿಳಿಸುವ ಹಲವು ಹದೀಸ್‍ಗಳಿವೆ. ಪ್ರವಾದಿ ಸ್ವಲ್ಲಲ್ಲಾಹುಅಲೈಹಿವಸಲ್ಲಮರು ಹೇಳಿದರು : ‘ಫಿತ್ರ್ ಝಕಾತ್ ಎಲ್ಲ ಅನಗತ್ಯ ಕಾರ್ಯಗಳಿಂದಲೂ ಉಪವಾಸಿಗನಿಗೆ ಶುದ್ದತೆಯನ್ನು ನೀಡುತ್ತದೆ’. ರಮಳಾನ್ ತಿಂಗಳು ಆಕಾಶ ಭೂಮಿ ಮಧ್ಯೆ ಬಂಧಿಸಲ್ಪಟ್ಟಿರುತ್ತದೆ. ಅದನ್ನು ಫಿತ್ರ್ ಝಕಾತ್ ಇಲ್ಲದೆ ಮೇಲ್ಭಾಗಕ್ಕೆ ಎತ್ತಲ್ಪಡುವುದಿಲ್ಲ. ಇಮಾಂ ಶಾಫಿ (ರ) ಹೇಳಿದರು : ‘ಫಿತ್ರ್ ಝಕಾತ್ ಸಹ್‍ವಿನ ಸುಜೂದ್ ಇದ್ದಂತೆ. ನಮಾಝ್‍ನ ನ್ಯೂನ್ಯತೆಗಳನ್ನು ಸಹ್‍ವಿನ ಸುಜೂದಿನಿಂದ ಪರಿಹರಿಸಲ್ಪಡುವಂತೆ ಉಪವಾಸದ ಕೊರತೆಯನ್ನು ಝಕಾತಿನಿಂದ ಪರಿಹರಿಸಲ್ಪಡುತ್ತದೆ. ರಮಳಾನಿನ ಕೊನೆಯ ನಿಮಿಷ ಮತ್ತು ಶವ್ವಾಲಿನ ಪ್ರಾರಂಭ ನಿಮಿಷಗಳಲ್ಲಿ ಒಬ್ಬ ಬದುಕಿದ್ದರೆ ಅವನ ಮೇಲೆ ಫಿತ್ರ್ ಝಕಾತ್ ಕಡ್ಡಾಯವಾಗುತ್ತದೆ. ರಮಳಾನಿನ ಕೊನೆಯ ನಿಮಿಷದಲ್ಲಿ ಅರ್ಧ ಭಾಗ ಮತ್ತು ನಂತರ ಅರ್ಧ ಭಾಗ ಹೊರ ಬಂದು ಹೆರಿಗೆಯಾಗಲ್ಪಟ್ಟ ಮಗುವಿಗೆ ಝಕಾತ್ ಕಡ್ಡಾಯವಿಲ್ಲ. ರಮಳಾನ್ ಸಮಾಪ್ತಿಗೊಳ್ಳುವ ಹಗಲಿನ ಸೂರ್ಯಾಸ್ತಕ್ಕಿಂತ ಮುಂಚೆ ಅಥವಾ ನಂತರ ಹೆತ್ತದ್ದೋ ಎಂದು ಸಂಶಯಿಸಲ್ಪಟ್ಟ ಮಗುವಿನ ಮೇಲೆ ಫಿತ್ರ್ ಝಕಾತ್ ಕಡ್ಡಾಯವಿಲ್ಲ. ಆದರೆ ಸೂರ್ಯಸ್ತಕ್ಕಿಂತ ಮುಂಚೆ ಅಥವಾ ನಂತರ ಮರಣ ಹೊಂದಿದ್ದಾ ಎಂಬ ವಿಷಯದಲ್ಲಿ ಸಂದೇಹ ಬಂದರೆ ಆ ವ್ಯಕ್ತಿಯ ಮೇಲೆ ಫಿತ್ರ್ ಝಕಾತ್ ಕಡ್ಡಾಯವಾಗುತ್ತದೆ.

No comments

Post a Comment