ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿದ ಟಿವಿ ಚಾನೆಲ್ಗಳು

No comments

ಬೆಂಗಳೂರು, ಮೇ 8: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ಪ್ರಸಾರ ಮಾಡಿರುವುದು ಇದೀಗ ವ್ಯಾಪಕ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಎರಡು ದಿನಗಳ ಹಿಂದೆ ರಾಜಧಾನಿ ಬೆಂಗಳೂರಿನ ಮೆಟ್ರೋ ನಿಲ್ದಾಣದಲ್ಲಿ ಹೀಗೆ ಕಾಣಿಸಿಕೊಂಡ ವ್ಯಕ್ತಿಯನ್ನು ‘ಶಂಕಿತ ಉಗ್ರ’ ಎಂದು ಕರೆದು ಟಿವಿ ಚಾನೆಲ್‌ ಗಳು ವ್ಯಾಪಕ ವದಂತಿಗಳನ್ನು ಹರಡಿ ನಗರದಲ್ಲಿ ಆತಂಕ ಸೃಷ್ಟಿಸಿದ್ದವು. ಆದರೆ ಇದೀಗ ಆ ವ್ಯಕ್ತಿ 57 ವರ್ಷ ಪ್ರಾಯದ ಗಡಿಯಾರ ವ್ಯಾಪಾರಿ ರಿಯಾಝ್ ಅಹ್ಮದ್ ಎನ್ನುವುದು ಬೆಳಕಿಗೆ ಬಂದಿದೆ. ಇವರು 20 ವರ್ಷಗಳಿಂದ ಬೆಂಗಳೂರಿನಲ್ಲಿ ಕೈಗಡಿಯಾರ ವ್ಯಾಪಾರ ಮಾಡುತ್ತಿದ್ದಾರೆ.
“ಮೇ 7ರ ಮಂಗಳವಾರದಂದು ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸು ತೆರಳಲು ಮೆಜಿಸ್ಟಿಕ್ ನ ಮೆಟ್ರೋ ರೈಲ್ವೆ ನಿಲ್ದಾಣಕ್ಕೆ ಹೋಗಿ, ಅಲ್ಲಿಂದ ಗಂಗೊಂಡನಹಳ್ಳಿಯ ಮನೆಗೆ ತೆರಳಿದೆ. ಆದರೆ, ಮರುದಿನ ಕೆಲ ಸುದ್ದಿವಾಹಿನಿಗಳಲ್ಲಿ ನನಗೆ ಶಂಕಿತ ಉಗ್ರನ ಹಣೆಪಟ್ಟಿ ಹಚ್ಚಿ ಸುದ್ದಿ ಬಿತ್ತರವಾಗುತ್ತಿತ್ತು. ಸಾಮಾಜಿಕ ಜಾಲತಾಣ ಹಾಗೂ ಸುದ್ದಿ ವಾಹಿನಿಯನ್ನು ನೋಡಿದವರು ನನ್ನನ್ನು ದೇಶದ್ರೋಹಿಯಂತೆ ಗುಮಾನಿಯಿಂದ ನೋಡಲಾರಂಭಿಸಿದರು” ಎಂದು ಅವರು ದುಃಖ ತೋಡಿಕೊಂಡರು.
‘‘ನಾನು ಬಡ ವ್ಯಾಪಾರಿ, ಸಾಮಾನ್ಯ ನಾಗರಿಕ, ಇಲ್ಲಿಯವರೆಗೂ ಯಾರಿಗೂ ತೊಂದರೆ ಕೊಟ್ಟಿದ್ದಿಲ್ಲ. ಆದರೆ ಜುಬ್ಬಾ ಧರಿಸಿ ಗಡ್ಡ ಬಿಟ್ಟ ಕಾರಣಕ್ಕೆ ಶಂಕಿತ ಉಗ್ರನ ಪಟ್ಟ ಕಟ್ಟಿದರೆ, ಬೀದಿಗೆ ತಂದು ನಿಲ್ಲಿಸಿದರೆ ಏನು ಮಾಡುವುದು’’ ಎಂದು ಅವರು ಪತ್ರಿಕೆಯೊಂದಿಗೆ ಕಣ್ಣೀರು ಹಾಕಿದರು.
“ಸಾಮಾಜಿಕ ಜಾಲತಾಣಗಳು ಮತ್ತು ಸುದ್ದಿವಾಹಿನಿಗಳ ದೆಸೆಯಿಂದ ಇವತ್ತು ಸಮಾಜದಲ್ಲಿ ನಾನು ಅಪರಾಧಿ ಸ್ಥಾನದಲ್ಲಿ ನಿಂತಿದ್ದೇನೆ. ಇಂತಹ ಸುಳ್ಳು ಸುದ್ದಿಗಳಿಂದ ಸ್ವಾಭಿಮಾನದಿಂದ ವ್ಯಾಪಾರ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ನನಗೆ ನೋವುಂಟಾಗಿದೆ. ಅಷ್ಟೇ ಅಲ್ಲದೆ, ಕುಟುಂಬಸ್ಥರು ಭಯಭೀತರಾಗಿದ್ದಾರೆ. ಕೆಲ ಸಂಘಟನೆಗಳು ಕಾನೂನು ಹೋರಾಟ ನಡೆಸಿ ಎಂದು ಜೊತೆಗೂಡಿದ್ದಾರೆ. ಸಂಘಟಕರೊಂದಿಗೆ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ, ಸಿಸಿ ಟಿವಿ ಫೂಟೇಜ್ ಲೀಕ್ ಮಾಡಿದ ಮೆಟ್ರೋ ಸಿಬ್ಬಂದಿ ವಿರುದ್ಧ ಹಾಗೂ ಸುಳ್ಳು ಸುದ್ದಿ ಪ್ರಸಾರ ಮಾಡಿದ ಕೆಲ ಸುದ್ದಿ ವಾಹಿನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದೇನೆ’’ ಎಂದರು.
“ಶಂಕಿತ ಉಗ್ರ ಎಂದು ಆರೋಪಿಸಿ ಸುಳ್ಳು ಸುದ್ದಿ ಪ್ರಸಾರ ಮಾಡಿ ನನ್ನ ತೇಜೋವಧೆ ಮಾಡಿದ ಪಬ್ಲಿಕ್ ಟಿವಿ ಸುದ್ದಿ ವಾಹಿನಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಸುಳ್ಳು ಸುದ್ದಿ ಪ್ರಸಾರದಿಂದ ತಲೆ ಎತ್ತಿಕೊಂಡು ತಿರುಗದಂತಾಗಿದೆ, ಗೌರವಕ್ಕೆ ಧಕ್ಕೆಯಾಗಿದೆ, ನನ್ನ ಕುಟುಂಬಸ್ಥರು ಭಯಭೀತರಾಗಿದ್ದಾರೆ. ಪಬ್ಲಿಕ್ ಟಿವಿ ಸುದ್ದಿ ವಾಹಿನಿಯ ಮುಖ್ಯಸ್ಥರು, ಸತ್ಯ ತಿಳಿಯದೆ, ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಾರೆ, ಈ ಸಂಬಂಧ ಪೊಲೀಸರು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ಮನವಿ ಮಾಡಿಕೊಂಡಿದ್ದೇನೆ.
ಸುದ್ದಿ ಕೃಪೆ : ವಾರ್ತಾಭಾರತಿ

No comments

Post a Comment