ಕೋಲ್ಕತಾ : ಜೈಶ್ರೀರಾಮ್ ಎಂಬ ಘೋಷಣೆ ಬಳಸಿಕೊಂಡು ಬಿಜೆಪಿ, ರಾಜಕಾರಣದಲ್ಲಿ ಧರ್ಮವನ್ನು ಬೆರೆಸುತ್ತಿದೆ ಎಂದು ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಟುವಾಗಿ ಟೀಕಿಸಿದ್ದಾರೆ.
10 ಲಕ್ಷ ಜೈಶ್ರೀರಾಮ್ ಎಂಬ ಪೋಸ್ಟ್ಕಾರ್ಡ್ಗಳನ್ನು ಮಮತಾರಿಗೆ ಕಳುಹಿಸಲು ಬಿಜೆಪಿ ಪ್ಲಾನ್ ಮಾಡಿಕೊಂಡಿದೆ ಎಂಬ ಸುದ್ದಿ ಹರಡಿದ ಬೆನ್ನಲ್ಲೇ, ಫೇಸ್ಬುಕ್ನಲ್ಲಿ ಅವರು ಗುಡುಗಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಅದರ ನಾಯಕರು ಜೈ ಶ್ರೀರಾಮ್ ಎಂಬ ಧಾರ್ಮಿಕ ಘೋಷಣೆಯನ್ನೇ ತಮ್ಮ ಪಕ್ಷದ ಘೋಷಣೆಯನ್ನಾಗಿ ಮಾಡಿಕೊಂಡಿದ್ದಾರೆ. ಬಿಜೆಪಿಯ ಮಾಧ್ಯಮಗಳು ಹಾಗೂ ಸುಳ್ಳು ವಿಡಿಯೋ, ಸುದ್ದಿ, ತಪ್ಪು ಮಾಹಿತಿ ಮೂಲಕ ತಮ್ಮ ತತ್ವಗಳನ್ನು ಹರಡುತ್ತಿದ್ದಾರೆ. ಅಲ್ಲದೆ, ಸತ್ಯ ಹಾಗೂ ನೈಜತೆ ಹತ್ತಿಕ್ಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಾರಾಮ್ ಮೋಹನ್ ರಾಯ್ರಿಂದ ವಿದ್ಯಾಸಾಗರ್ವರೆಗೆ ಹಲವು ಸಮಾಜ ಸುಧಾರಕರು ಬಂಗಾಳದ ಸಹಿಷ್ಣುತೆ, ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಆದರೆ, ಬಿಜೆಪಿ ಬಂಗಾಳವನ್ನು ಟಾರ್ಗೆಟ್ ಮಾಡಿದೆ ಎಂದಿದ್ದಾರೆ.
ಪ್ರತಿ ಪಕ್ಷಕ್ಕೂ ಒಂದೊಂದು ಘೋಷಣೆಗಳಿವೆ. ನಾವು ಜೈ ಹಿಂದ್, ವಂದೇ ಮಾತರಂ ಘೋಷಣೆ ಕೂಗುತ್ತೇವೆ. ಎಲ್ಲ ಘೋಷಣೆಗಳನ್ನೂ ನಾವು ಗೌರವಿಸುತ್ತೇವೆ. ಅಂತೆಯೇ, ಜೈಸಾಯಿ ರಾಮ್, ಜೈ ಶ್ರೀ ರಾಮ್, ರಾಮ್ ನಾಮ್ ಸತ್ಯ ಹೈ ಮತಿತ್ಯಾದಿಗಳು ಧಾರ್ಮಿಕ ಹಾಗೂ ಸಾಮಾಜಿಕ ಹಿನ್ನೆಲೆ ಹೊಂದಿವೆ. ಆದರೆ, ಈ ಧಾರ್ಮಿಕ ಘೋಷಣೆಗಳನ್ನೂ ಬಿಜೆಪಿ ಬಳಸಿಕೊಂಡು ಅವುಗಳನ್ನು ರಾಜಕೀಯದಲ್ಲಿ ಬೆರೆಸುತ್ತಿದೆ. ಈ ಮೂಲಕ ಹಿಂಸೆಗೆ ಪ್ರಚೋದನೆ ನೀಡುತ್ತಿರುವುದನ್ನು ನಾವು ವಿರೋಧಿಸುತ್ತೇವೆ ಎಂದು ಕುಟುಕಿದ್ದಾರೆ.
ಬಿಜೆಪಿ ಜೈ ಶ್ರೀ ರಾಮ್ ಎಂಬ ಘೋಷಣೆ ಮೂಲಕ ಬ್ಯಾನರ್ಜಿಗೆ ಟಾಂಗ್ ನೀಡುತ್ತಲೇ ಇದೆ. ಇತ್ತೀಚೆಗೆ ಹಲವರು ಅವರ ಕಾರನ್ನು ಅಡ್ಡಗಟ್ಟಿ, ಜೈ ಶ್ರೀ ರಾಮ್ ಎಂದು ಕೂಗಿದ್ದರಿಂದ ಮಮತಾ ಗರಂ ಆಗಿದ್ದರು. ಈಗ ಮತ್ತೆ ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದಾರೆ ಪಶ್ಚಿಮಬಂಗಾಳ ಮುಖ್ಯಮಂತ್ರಿ.
No comments
Post a Comment