ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ, ಇದೆಲ್ಲಾ ಸುಳ್ಳು ಸುದ್ದಿ; ದಿನೇಶ್​ ಗುಂಡೂರಾವ್​ ಸ್ಪಷ್ಟನೆ


ಬೆಂಗಳೂರು,(ಜೂ.15): ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರ ಸುಳ್ಳು. ಎಲ್ಲಿಂದ ಈ ಸುದ್ದಿ ಬಂದಿದೆಯೋ ನನಗೆ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಸ್ಪಷ್ಟನೆ ನೀಡಿದ್ದಾರೆ.
ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಾನು ನಿರ್ವಹಿಸಿಕೊಂಡು ಹೋಗುತ್ತಿದ್ದೇನೆ‌‌. ಈ ಸುದ್ದಿಯನ್ನ ಯಾರು ಸೃಷ್ಟಿ ಮಾಡಿದ್ದಾರೋ, ಎಲ್ಲಿಂದ ಹುಟ್ಟಿದೆಯೋ ನನಗೆ ಗೊತ್ತಿಲ್ಲ. ಇದಕ್ಕೆ ಕಾರಣಕರ್ತರು ಯಾರೆಂದು ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಎಲ್ಲರೊಂದಿಗೆ ಒಗ್ಗಟಿನಿಂದ ಹೊಗಬೇಕಿದೆ. ನಾನು ಹೈಕಮಾಂಡ್​ಗೆ ಈವರೆಗೂ ಯಾವುದೇ ಪತ್ರ ಬರೆದಿಲ್ಲ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಮುನ್ನಡೆಸಿಕೊಂಡು ಹೊಗುತ್ತಿದ್ದೇನೆ. ನನ್ನನ್ನು ಮುಂದುವರಿಸುವುದು ಬಿಡುವುದು ಪಕ್ಷದ ವರಿಷ್ಠಗೆ ಬಿಟ್ಟ ವಿಚಾರ ಎಂದು ಹೇಳಿದರು.
ನಿನ್ನೆ ನನ್ನ ವೈಯಕ್ತಿಕ ಕೆಲಸದಿಂದ ಸಂಪುಟ ವಿಸ್ತರಣೆ ಕಾರ್ಯಕ್ರಮಕ್ಕೆ ನಾನು ಹೊಗಿರಲಿಲ್ಲ. ಆದರೆ‌ ಮೊನ್ನೆ ಪಕ್ಷೇತರ ಶಾಸಕ ಶಂಕರ್ ಜೊತೆ ಕೂತು ಎಲ್ಲಾ ಮಾತನಾಡಿದ್ದೇನೆ‌‌ ಎಂದು ಸ್ಪಷ್ಟನೆ ಕೊಟ್ಟರು. ಕೆಲ ವಾಟ್ಸ್ ಅಪ್ ಗ್ರೂಪ್ ಗಿಳಿಂದ ಲೆಫ್ಟ್ ಆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಾಟ್ಸ್ ಗ್ರೂಪ್ ಗಳನ್ನು ನಾನೇ ಡಿಲೀಟ್ ಮಾಡಿದೆ. ಸಾವಿರಾರು ಮೆಸೇಜ್​​ಗಳು ಬರುತಿತ್ತು ಎಂದರು.
ಇನ್ನು, ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, 6-8 ತಿಂಗಳಲ್ಲಿ ಮತ್ತೆ ಸಂಪುಟ ವಿಸ್ತರಣೆಯಾಗುತ್ತದೆ. ಸಚಿವರ ಕಾರ್ಯವೈಖರಿ ಬಗ್ಗೆ ಮೌಲ್ಯಮಾಪನ ಮಾಡಲಾಗುತ್ತಿದೆ. ಪುನರ್​ ರಚನೆ ವೇಳೆ ಹಿರಿಯರಿಗೆ ಪ್ರಾತಿನಿಧ್ಯ ನೀಡಲಾಗುತ್ತದೆ. ಮೈತ್ರಿ ಸರ್ಕಾರದಲ್ಲಿ ಯಾವುದೇ ಅತೃಪ್ತಿಯಲ್ಲ ಎಂದು ಹೇಳಿದರು.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಸೋಲಿನ ಹೊಣೆ ಹೊತ್ತು  ದಿನೇಶ್​ ಗುಂಡೂರಾವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು. ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿಗೆ ರವಾನಿಸಿದ್ದಾರೆ ಎಂದು ಹೇಳಲಾಗಿತ್ತು.