ಐಎಂಎ ಕಂಪೆನಿಯಲ್ಲಿ ವಿದೇಶಿ ಹೂಡಿಕೆ ಪತ್ತೆ; ಮತ್ತೊಂದು ಪ್ರಕರಣ ದಾಖಲಿಸಿ ವಿಚಾರಣೆ ಕೈಗೆತ್ತಿಕೊಂಡ ಇಡಿ ಅಧಿಕಾರಿಗಳು


ಬೆಂಗಳೂರು (ಜೂನ್​.15); ದಿನದಿಂದ ದಿನಕ್ಕೆ ವಿವಿಧ ತಿರುವು ಪಡೆಯುತ್ತಿರುವ ಐಎಂಎ ಬಹುಕೋಟಿ ವಂಚನೆ ಪ್ರಕರಣ ಶನಿವಾರ ಮತ್ತೊಂದು ತಿರುವು ಪಡೆದಿದೆ. ಮನ್ಸೂರ್​ ಖಾನ್ ಮಾಲೀಕತ್ವದ ಐಎಂಎ ಕಂಪೆನಿಯಲ್ಲಿ ವಿದೇಶಿ ಹಣ ಹೂಡಿಕೆಯಾಗಿರುವುದನ್ನು ಪತ್ತೆ ಹಚ್ಚಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಈ ಕುರಿತು ಮತ್ತೊಂದು ಸ್ವತಂತ್ರ್ಯ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಐಎಂಎ ಕಂಪನಿಯಲ್ಲಿ ವಿದೇಶಿ ಹೂಡಿಕೆ, ವಿದೇಶಿ ಹಣಕಾಸು ವಹಿವಾಟು ಹಾಗೂ ವಿದೇಶಿ ವಿನಿಮಯ ಮಾಡಿರುವುದನ್ನು ಪತ್ತೆ ಹಚ್ಚಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನಿನ್ನೆ ಕಮರ್ಶಿಯಲ್ ಸ್ಟ್ರೀಟ್​ ಪೊಲೀಸ್​ ಠಾಣೆಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅಲ್ಲದೆ ಇದರ ಆಧಾರದ ಮೇಲೆ ಎಫ್​ಇಎಂಎ, ಎಫ್​ಇಆರ್​ಎ ಹಾಗೂ ಪಿಎಂಎಲ್​ಎ ಸೇರಿದಂತೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಐಎಂಎ ಜ್ಯುವೆಲ್ಸ್ ಹೆಸರಿನಲ್ಲಿ ಜನರಿಗೆ ಸಾವಿರಾರು ಕೋಟಿ ವಂಚನೆ ಎಸಗಿದ್ದ ಮನ್ಸೂರ್​ ಖಾನ್ ದುಬೈಗೆ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ. ಏರ್​ಪೋರ್ಟ್​ಗೆ ತನ್ನ ಕಾರಿನಲ್ಲೇ ಆಗಮಿಸಿದ್ದ ಮನ್ಸೂರ್ ಕಾರ್ ಅನ್ನು ಅಲ್ಲಿಯೇ ಬಿಟ್ಟು ಹೋಗಿದ್ದ ಎನ್ನಲಾಗಿತ್ತು.
ಹೀಗೆ ಆತ ಬಿಟ್ಟುಹೋಗಿರುವ ಐಶಾರಾಮಿ ಕಾರ್ ಇದೀಗ ಪತ್ತೆಯಾಗಿದೆ. ಕೆಎ 01 ಎಂಎಫ್​-9010 ಎಂಬ ಸಂಖ್ಯೆಯ ಕಾರು ಮಿಲನ್​ ಫಾರೂಕ್ ಎಂಬ ಹೆಸರಿನಲ್ಲಿ ನೋಂದಣಿಯಾಗಿದ್ದು ಕಳೆದ 4-5 ದಿನಗಳಿಂದ ಕೊಡಿಗೇಹಳ್ಳಿ ಫ್ಲೈಓವರ್​ ಬಳಿ ನಿಂತಿದೆ. ಈ ಕಾರು ಮನ್ಸೂರ್ ಖಾನ್ ಅವರದ್ದೇ ಎನ್ನಲಾಗುತ್ತಿದೆ.

ಪ್ರಸ್ತುತ ವಾಹನವನ್ನು ಟೋಯಿಂಗ್ ಮಾಡಿರುವ ಹೆಬ್ಬಾಳ ಸಂಚಾರಿ ಪೊಲೀಸರು ಎಸ್ಐಟಿ ಅಧಿಕಾರಿಗಳಿಗೆ ಅದನ್ನು ಒಪ್ಪಡಿಸಿದ್ದಾರೆ.