ದೇಗುಲ ಪ್ರವೇಶಿಸಲು ಯತ್ನಿಸಿದ ಎಂದು ದಲಿತ ಬಾಲಕನನ್ನು ಹಗ್ಗದಲ್ಲಿ ಕಟ್ಟಿ ಥಳಿಸಿದ ಮೇಲ್ವರ್ಗದ ವ್ಯಕ್ತಿ

No comments

ಜೈಪುರ: ದಲಿತ ಬಾಲಕನೊಬ್ಬ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ ಎಂದು ಆರೋಪಿಸಿ ಮೇಲ್ವರ್ಗಕ್ಕೆ ಸೇರಿದ ವ್ಯಕ್ತಿಯೊಬ್ಬ ಆ ಬಾಲಕನನ್ನು ಹಗ್ಗದಲ್ಲಿ ಕಟ್ಟಿ ಅಮಾನವೀಯವಾಗಿ ಥಳಿಸಿರವ ಹೀನ ಕೃತ್ಯ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಪಾಲಿ ಜಿಲ್ಲೆಯ ಧನೇರಿಯಾ ಹಳ್ಳಿಯಲ್ಲಿ ಜೂನ್​ 1ರಂದು ನಡೆದಿದೆ. ಬಾಲಕನನ್ನು ಥಳಿಸಿರುವ ವಿಡಿಯೋ ಆನಂತರ ವೈರಲ್​ ಆಗಿದೆ.
ವರದಿಗಳ ಪ್ರಕಾರ, ಸಂತ್ರಸ್ತ ಬಾಲಕನ ಚಿಕ್ಕಪ್ಪ ಘಟನೆ ನಡೆದ ಎರಡು ದಿನಗಳ ನಂತರ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಪೊಸ್ಕೋ ಕಾಯ್ದೆಯಡಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಘಟನೆ ನಂತರ ಸಂತ್ರಸ್ತ ಬಾಲನ ವಿರುದ್ಧ ಶಾಂತಿ ಕದಡುವ ಆರೋಪ ಮಾಡಿ ವ್ಯಕ್ತಿಯೊಬ್ಬ ನೀಡಿದ ದೂರಿನ ಮೇರೆಗೆ ಬಾಲಕನನ್ನು ಬಂಧಿಸಿ, ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ 23 ವರ್ಷದ ಯುವಕನನ್ನು ಮೇಲ್ಜಾತಿಗೆ ಸೇರಿದ ಕೆಲವರು ಥಳಿಸಿದ ಪರಿಣಾಮ ಆತ ಅಸುನೀಗಿದ್ದ ಪ್ರಕರಣ ನಡೆದ ತಿಂಗಳ ಬಳಿಕ ಈ ಘಟನೆ ನಡೆದಿದೆ.
ಕಳೆದ ಎರಡು ತಿಂಗಳಲ್ಲಿ ಜಾತಿ ವಿಚಾರವಾಗಿ ಸಂಬಂಧಪಟ್ಟಂತೆ ಈ ರೀತಿಯ ಹಲವು ಘಟನೆಗಳು ನಡೆದಿವೆ. ದಲಿತ ವರ ಕುದುರೆ ಮೇಲೆ ಕುಳಿತ ಮೆರವಣಿಗೆ ಮಾಡಿದ ಎಂಬ ಕಾರಣಕ್ಕೆ ಆತನ ಮೇಲೂ ಅಮಾನುಷವಾಗಿ ಹಲ್ಲೆ ಮಾಡಲಾಗಿತ್ತು. ರಾಜಸ್ಥಾನದ ಬಿಲ್ವಾರಾ ಜಿಲ್ಲೆಯಲ್ಲಿ ಮದುವೆಯಲ್ಲಿ ದಲಿತ ವರ ಕುದುರೆ ಮೇಲೆ ಕುಳಿತು ಮೆರವಣಿಗೆ ಮಾಡಿದರು ಎಂಬ ಕಾರಣಕ್ಕೆ ಮೇಲ್ವಾತಿಗೆ ಸೇರಿದ ಗುಂಪು ಹಲ್ಲೆ ಮಾಡಿತ್ತು.
ಗುಜರಾತ್​ನ ಮಹುವಾದ್ ಹಳ್ಳಿಯಲ್ಲೂ ಇದೇ ರೀತಿಯ ಘಟನೆ ಕೂಡ ನಡೆದಿತ್ತು. ದಲಿತರೊಬ್ಬರು ತಮ್ಮ ಗ್ರಾಮದ ದೇಗುಲದಲ್ಲಿ ದಲಿತರ ಮದುವೆಗೆ ಸರ್ಕಾರ ಅವಕಾಶ ನೀಡಿಲ್ಲ ಎಂದು ಆರೋಪಿಸಿ ಫೇಸ್​ಬುಕ್​ನಲ್ಲಿ ಕಾಮೆಂಟ್​ ಮಾಡಿದ್ದರು. ಇದರಿಂದ ಕೆರಳಿದ ಮೇಲ್ವರ್ಗದ 200ರಿಂದ 300 ಜನರು ಆ ದಲಿತ ಕುಟುಂಬದ ಮೇಲೆ ಹಲ್ಲೆ ಮಾಡಿದ್ದರು.

No comments

Post a Comment