ನಿಫಾ ವೈರಸ್ ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ವಹಿಸಿ; ಡಾ.ಕೆ.ಮೋಹನ್ 

No comments

ಮಡಿಕೇರಿ ಜೂ.06(ಕರ್ನಾಟಕ ವಾರ್ತೆ):-ನಿಫಾ ವೈರಸ್ ಜಿಲ್ಲೆಯಲ್ಲಿ ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಆಶಾ ಕಾರ್ಯಕರ್ತೆಯರಿಗೆ, ಅಂಗನವಾಡಿ ಕಾರ್ಯಕರ್ತೆಯರು ಎಲ್ಲಾ ವೈದ್ಯಾಧಿಕಾರಿಗಳು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದರು. ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಿಫಾ ವೈರಸ್ ತಡೆಗಟ್ಟುವ ಸಂಬಂಧ ನಡೆದ ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರ್ನಾಟಕದ ಎಂಟು ಜಿಲ್ಲೆಗಳಲ್ಲಿ ಈಗಾಗಲೇ ನಿಫಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸರ್ಕಾರವು ಸೂಚಿಸಿದ್ದು, ಆ ಎಂಟು ಜಿಲ್ಲೆಗಳ ಪೈಕಿ ಕೊಡಗು ಜಿಲ್ಲೆ ಕೂಡ ಆದ್ಯತಾ ಪಟ್ಟಿಯಲ್ಲಿರುವುದರಿಂದ ನಿಫಾ ವೈರಸ್ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ತಿಳಿಸಿದರು. ಎಲ್ಲಾ ತಾಲ್ಲೂಕು ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜೂನ್, 07 ರಿಂದ 10 ರವರೆಗೆ ನಿಫಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಸಂಬಂಧ ವೈದ್ಯರಿಗೆ, ಶುಶ್ರೂಷಕರಿಗೆ, ಆಶಾ ಕಾರ್ಯಕರ್ತೆಯರಿಗೆ ಅರಿವು ಮೂಡಿಸುವ ಕಾರ್ಯಾಗಾರವನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರು ತಿಳಿಸಿದರು. ನಿಫಾ ವೈರಸ್ ಕಂಡುಬಂದ ಸಂದರ್ಭದಲ್ಲಿ ರೋಗಿಗಳಿಗೆ ಉಪಚರಿಸಲು ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಎರಡು ಹಾಸಿಗೆಯ ವಿಶೇಷ ತುರ್ತು ಚಿಕಿತ್ಸಾ ನಿಗಾ ಘಟಕ ತೆರೆಯಲು ಸೂಚನೆ ನೀಡಿದರು. ವಿಶೇಷವಾಗಿ ಜಿಲ್ಲೆಯ ಹಾಡಿಗಳು, ಗಿರಿಜನರು ವಾಸಿಸುವ ಪ್ರದೇಶಗಳಲ್ಲಿ ವಿಶೇಷ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ಸೂಚನೆ ನೀಡಿದರು. ಒಂದು ವೇಳೆ ರೋಗಿಗಳಲ್ಲಿ ನಿಫಾ ವೈರಸ್ ಕಂಡು ಬಂದಲ್ಲಿ ಎಲ್ಲಾ ಬೆಂಬಲಾತ್ಮಕ ಔಷಧ ಮೂಲಕ ಉಪಚರಿಸಲಾಗುವುದು. ಹಾಗೂ ಅಗತ್ಯವಿರುವ ಹೆಚ್ಚಿನ ಚಿಕಿತ್ಸೆಯನ್ನು ನೀಡಲಾಗುವುದು ಎಂದು ತಿಳಿಸಿದರು. ನಿಫಾ ವೈರಸ್ ಹರಡುವಿಕೆ, ರೋಗದ ಲಕ್ಷಣಗಳು, ಅಗತ್ಯ ಮುನ್ನೆಚ್ಚರಿಕೆ ಕುರಿತು ಜಿಲ್ಲಾ ಸರ್ವೇಕ್ಷಣಾ ಘಟಕದ ವೈದ್ಯಾಧಿಕಾರಿ ಡಾ.ಶಿವಕುಮಾರ್ ಅವರು ಸಭೆಯಲ್ಲಿ ಮಾಹಿತಿ ನೀಡಿ ಸಾರ್ವಜನಿಕರಲ್ಲಿ ಈ ಲಕ್ಷಣಗಳು ಕಂಡು ಬಂದಲ್ಲಿ ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಎ.ಸಿ. ಶಿವಕುಮಾರ್, ತಾಲ್ಲೂಕು ವೈದ್ಯಾಧಿಕಾರಿಗಳು, ವೈದ್ಯರು ಇತರರು ಇದ್ದರು. ಇನ್ನಷ್ಟು ಮಾಹಿತಿ:-ನಿಫಾ ಜ್ವರವು ಮೆದುಳು ಮತ್ತು ಹೃದಯವನ್ನು ಘಾಸಿಗೊಳಿಸಿ ಜೀವಕ್ಕೆ ಕುತ್ತು ತರುವ ಅಪಾಯಕಾರಿ ವೈರಸ್. ಸೋಂಕು ಮಲೇಷ್ಯಾದ ನಿಫಾ ಎಂಬಲ್ಲಿ 1998ರಲ್ಲಿ ಮೊದಲ ಬಾರಿಗೆ ಈ ವೈರಸ್ ಕಾಣಿಸಿಕೊಂಡಿದ್ದರಿಂದ ಅದಕ್ಕೆ ನಿಫಾ ಎಂಬ ಹೆಸರು ಬಂದಿದೆ. 2011ರಲ್ಲಿ ಬಾಂಗ್ಲಾ ದೇಶದಲ್ಲೂ ಈ ಸೋಂಕು ಹರಡಿತ್ತು. ಪ್ರಸ್ತುತ ಈ ವೈರಸ್ ಸೋಂಕು ಮಲೇಷ್ಯಾ, ಸಿಂಗಾಪುರ, ಭಾರತ ಮತ್ತು ಬಾಂಗ್ಲಾ ದೇಶಗಳಲ್ಲಿ ಹರಡಿದೆ. ನೆರೆಯ ರಾಜ್ಯ ಕೇರಳದಲ್ಲಿ ಈ ಸೋಂಕು ಹರಡಿದ್ದು, ರಾಜ್ಯದಲ್ಲಿ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ರೋಗದ ಲಕ್ಷಣಗಳು:-ಜ್ವರ, ತಲೆನೋವು, ಮೈಕೈನೋವು, ವಾಂತಿ, ನಡುಕ, ನಿದ್ರಾಲಸ್ಯ, ತೊದಲುವಿಕೆ, ಪ್ರಜ್ಞಾಹೀನತೆ. ಸೋಂಕಿಗೆ ಯಾವುದೇ ನಿರ್ದಿಷ್ಟವಾದ ಚಿಕಿತ್ಸೆ ಲಭ್ಯವಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾದ ಚಿಕಿತ್ಸೆ ಹಾಗೂ ಸೂಕ್ತ ನಿರ್ವಹಣೆಯಿಂದ ಸೋಂಕನ್ನು ಗುಣಪಡಿಸಬಹುದು. ಹಂದಿ, ಕುದುರೆ, ನಾಯಿ ಮತ್ತು ಬೆಕ್ಕುಗಳಂತಹ ಸೋಂಕಿತ ಜಾನುವಾರಗಳು ಮಧ್ಯಂತರ ಮೂಲಗಳಾಗಿರುವುದರಿಂದ ಇವುಗಳನ್ನು ಪ್ರತ್ಯೇಕವಾಗಿಡಬೇಕು. ಶಂಕಿತ ಪ್ರಕರಣಗಳನ್ನು ಪ್ರತ್ಯೇಕವಾಗಿಡತಕ್ಕದ್ದು, ರೋಗಿಗಳು ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಸಾಬೂನು ನೀರು ಬಳಸಿ ಶುಚಿಗೊಳಿಸಬೇಕು. ಹಸ್ತಲಾಘವ ಕೊಡವುದನ್ನು ತಪ್ಪಿಸಿ ಹಾಗೂ ಸೋಂಕಿತ ಜನರ ಸಂಪರ್ಕಕ್ಕೆ ಬಂದ ನಂತರ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಬೇಕು. ರೋಗಿಗಳನ್ನು ಉಪಚರಿಸುವಾಗ ಮಾಸ್ಕ್ ಮತ್ತು ಗ್ಲೌಸ್ ತಪ್ಪದೇ ಬಳಸುವುದು, ಎಲ್ಲಾ ರೀತಿಯ ಹಣ್ಣುಗಳನ್ನು ಚೆನ್ನಾಗಿ ತೊಳೆದು, ಸಿಪ್ಪೆ, ಸುಲಿದು ಮತ್ತು ಬೇಯಿಸಿ ತಿನ್ನುವುದು, ಪ್ಲೂ ರೀತಿಯ ಲಕ್ಷಣಗಳು ಕಂಡುಬಂದರೆ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ, ನೆರವಿಗಾಗಿ ಸಹಾಯವಾಣಿ 104 ಕ್ಕೆ ಕರೆ ಮಾಡುವುದು. ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿರುವ ಹಣ್ಣುಗಳನ್ನು ತಿನ್ನಬಾರದು. ಬಾವಲಿಗಳು ಅತಿ ಹೆಚ್ಚಾಗಿ ಕಂಡು ಬರುವ ಪ್ರದೇಶಗಳಿಂದ ಸಂಗ್ರಹಿಸಿದ ನೀರಾ ಕುಡಿಯಬಾರದು. ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯಗಳನ್ನು ಕೈಗೊಳ್ಳುವುದು, ರೋಗಿಯ ಶರೀರದ ಸ್ರಾವದೊಂದಿಗೆ(ಜೊಲ್ಲು, ಬೇವರು ಮಾತ್ರ ) ಸಂಪರ್ಕ ತಪ್ಪಿಸಬೇಕು.

No comments

Post a Comment