ಸಾಗರ (ಮಧ್ಯಪ್ರದೇಶ): ವೈದ್ಯರನ್ನು ದೇವರೆಂದು ಭಾವಿಸುವವರಿದ್ದಾರೆ. ಆದರೆ, ಕೆಲವೊಮ್ಮೆ ವೈದ್ಯರು ಮಾಡುವ ಯಡವಟ್ಟುಗಳು ಅಂತಿಂಥದ್ದಲ್ಲ. ಮಧ್ಯಪ್ರದೇಶದಲ್ಲಿ ವೈದ್ಯರು ಸತ್ತಿದ್ದಾನೆಂದು ಘೋಷಿಸಿದ್ದ 72 ವರ್ಷದ ವ್ಯಕ್ತಿಯೋರ್ವರು ಶವಾಗಾರದಲ್ಲಿ ಎದ್ದು ಕುಳಿತ ಘಟನೆ ನಡೆದಿದೆ.
ಚತರ್ಪುರ ಜಿಲ್ಲೆಯ ನೌಗಾಂವ್ ನಿವಾಸಿ ಕಿಷನ್ ಅವರನ್ನು ಬಿನಾ ನಗರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದಾಗ ಸತ್ತುಹೋಗಿರುವುದಾಗಿ ವೈದ್ಯರು ಘೋಷಿಸಿದ್ದರು. ಆದರೆ, ಮಾರನೇ ದಿನ ಶವಾಗಾರದಿಂದ ಕಿಷನ್ ಅವರ ದೇಹವನ್ನು ತೆಗೆಯುವ ವೇಳೆ ಅವರು ಉಸಿರಾಡುತ್ತಿದ್ದುದು ಗಮನಕ್ಕೆ ಬಂದಿತು.
72 ವರ್ಷದವರಾಗಿದ್ದ ಕಿಷನ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ರಸ್ತೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಪರಿಶೀಲಿಸಿದ ವೈದ್ಯರು ಅವರು ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು. ಈ ಬಗ್ಗೆ ಪೊಲೀಸರಿಗೆ ಪತ್ರವನ್ನೂ ಕಳುಹಿಸಿದ್ದರು. ಅಸಲಿಗೆ ಆ ವ್ಯಕ್ತಿ ಸತ್ತೇ ಇರಲಿಲ್ಲ. ಮಾರನೇ ಬೆಳಗ್ಗೆ ಪೊಲೀಸರು ತಪಾಸಣೆಗೆಂದು ಶವಾಗಾರಕ್ಕೆ ಬಂದಾಗ ಆ ವ್ಯಕ್ತಿ ಉಸಿರಾಡುತ್ತಿದ್ದರು. ಬಳಿಕ, ಅವರಿಗೆ ತುರ್ತು ಚಿಕಿತ್ಸೆ ನೀಡಲಾಯಿತಾದರೂ ಆ ದಿನ ಸಂಜೆ ಸಾವನ್ನಪ್ಪಿದ್ದರು.

No comments
Post a Comment