ಶಿವಮೊಗ್ಗ (ಜೂ.22): ಬೆಂಗಳೂರು ಉದ್ಧಾರವಾದರೆ ಸಾಕು. ರಾಜ್ಯ ಉದ್ದಾರವಾಗಲಿದೆ ಎಂಬ ಧೋರಣೆ ರಾಜ್ಯ ಸರ್ಕಾರ ಹೊಂದಿದೆ. ಇದೇ ಕಾರಣಕ್ಕೆ ಶರಾವತಿ ಹಿನ್ನೀರನ್ನು ಬೆಂಗಳೂರಿಗೆ ತರುವ ಯೋಜನೆಗೆ ಮುಂದಾಗಿದೆ. ಶಿವಮೊಗ್ಗದಲ್ಲಿಯೇ ಭೀಕರ ಬರ ಆವರಿಸಿದ್ದು, ಈ ಯೋಜನೆಯನ್ನು ಸರ್ಕಾರ ಕೈ ಬಿಡಬೇಕು ಎಂದು ಸಂಸದ ಬಿವೈ ರಾಘವೇಂದ್ರ ಒತ್ತಾಯಿಸಿದರು.
ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಮಾರಾಟ ವಿರೋಧ ವ್ಯಕ್ತಪಡಿಸಿದ ಅವರು, ಕಾರ್ಖಾನೆ ಉಳಿಸುವಲ್ಲಿ ಶಕ್ತಿ ಮೀರಿ ಎಲ್ಲಾ ಪ್ರಯತ್ನ ಮಾಡಲಾಗಿದೆ. ದೇಶದಲ್ಲಿ ಸಾರ್ವಜನಿಕ ವಲಯದ 28 ನಷ್ಟದಲ್ಲಿರುವ ಕಾರ್ಖಾನೆಗಳ ಬಂಡವಾಳ ಹಿಂತೆಗೆಯುವಂತೆ ನೀತಿ ಆಯೋಗ ಶಿಫಾರಸ್ಸು ಮಾಡಿದೆ. ಆಯಾ ರಾಜ್ಯ ಸರ್ಕಾರದವರು, ಕೇಂದ್ರ ಸರ್ಕಾರದ ಮೇಲೆ, ಬಂಡವಾಳ ಹಿಂತೆಗೆಯದಂತೆ, ಒತ್ತಡ ಹೇರುತ್ತಿದ್ದಾರೆ. ಭದ್ರಾವತಿಯ ವಿ.ಐ.ಎಸ್.ಎಲ್. ಕಾರ್ಖಾನೆ ಸಂಬಂಧಪಟ್ಟಂತೆಯೂ ಇದೆ ರೀತಿ, ಒತ್ತಡ ಹೇರಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲಾಗುತ್ತಿದೆ ಎಂದರು.
ಸರ್ಕಾರದ ನಿರ್ಣಯ ಕುರಿತು ಮಾತನಾಡಿದ ಅವರು, ರಾಜಧಾನಿಯಲ್ಲಿನ ಬರ ನೀಗಿಸಲು ಶರಾವತಿ ನೀರನ್ನು ಬೆಂಗಳೂರಿಗೆ ತರಲು ಯೋಜನೆ ರೂಪಿಸಲು ಸರ್ಕಾರ ಮುಂದಾಗಿರುವುದು ಅತ್ಯಂತ ಖೇದಕರ ಸಂಗತಿ. ಪರಿಸರ ಉಳಿಸುವ ಯೋಜನೆ ರೂಪಿಸುವುದನ್ನು ಬಿಟ್ಟು, ಈ ರೀತಿಯ ಯೋಜನೆ ಮಾಡಿರುವುದು ಸರಿಯಲ್ಲ ಎಂದರು.
ನದಿ ಮೂಲಗಳು ತಿರುಚುವುದರಿಂದ ಅದು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರತ್ತದೆ. ಈಗಾಗಲೇ ಶಿವಮೊಗ್ಗದ ಜನರು ಬರಗಾಲವನ್ನು ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಕ್ಷೀಣವಾಗಿದ್ದು, ಶೇ.70ರಷ್ಟು ಮಳೆ ಕೊರತೆ ಎದುರಿಸುತ್ತಿದ್ದೇವೆ. ಇಂತಹ ಶೋಚನಿಯ ಸ್ಥಿತಿಯಲ್ಲಿ ಶರಾವತಿ ನೀರನ್ನು ರಾಜಧಾನಿಗೆ ತರುವ ನಿರ್ಧಾರ ಸರಿಯಲ್ಲ.

No comments
Post a Comment