ರಾಮ ಮಂದಿರ ವಿವಾದ: ಸುಗ್ರೀವಾಜ್ಞೆ ಜಾರಿಗೆ ಮಾಡುವಂತೆ ಕೇಂದ್ರಕ್ಕೆ ಶಿವಸೇನೆ ಆಗ್ರಹ


ನವದೆಹಲಿ(ಜೂನ್​​.16): "ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿಯೇ ತೀರುತ್ತೇವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಈ ವಿಚಾರದಲ್ಲಿ ಸುಗ್ರೀವಾಜ್ಞೆ ಜಾರಿಗೆ ಮಾಡುವಂತೆ ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದ್ದೇವೆ. ಶೀಘ್ರದಲ್ಲೇ ರಾಮ ಮಂದಿರ ನಿರ್ಮಣವಾಗಲಿದೆ ಎಂಬ ನಂಬಿಕೆ ಇದೆ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ" ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್​​​ ಠಾಕ್ರೆ ತಿಳಿಸಿದ್ದಾರೆ.

ಶಿವಸೇನೆ ಮುಖ್ಯಸ್ಥ ಉದ್ಧವ್​​ ಠಾಕ್ರೆ ಮತ್ತು ಪುತ್ರ ಆದಿತ್ಯ ಠಾಕ್ರೆ ಇಂದು ಅಯೋಧ್ಯಕ್ಕೆ ಭೇಟಿ ನೀಡಿದ್ದರು. ಇವರ ಜೊತೆಗೆ ಕೇಂದ್ರ ಸಚಿವ ಅರವಿಂದ್​ ಸಾವಂತ್​​ ಮತ್ತು ಪಕ್ಷದ ವಕ್ತಾರ ಸಂಜಯ್​​ ರಾವತ್ ಕೂಡ ಹಾಜರಿದ್ದರು.
ಅಯೋಧ್ಯದಲ್ಲಿ ರಾಮ ಲಲ್ಲಾಕ್ಕೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರ ಜತೆಗೆ ಮಾತಾಡಿದ ಉದ್ಧವ್​​ ಠಾಕ್ರೆಯವರು, ಕೇಂದ್ರಕ್ಕೆ ಸುಗ್ರೀವಾಜ್ಞೆ ಜಾರಿಗೆ ಮಾಡುವಂತೆ ಹಿಂದಿನಿಂದಲೂ ಆಗ್ರಹಿಸುತ್ತಿದ್ದೇವೆ. ಪ್ರಸ್ತುತ ಲೋಕಸಭೆಯಲ್ಲಿ ಸರ್ಕಾರಕ್ಕೆ ಬೇಕಾದಷ್ಟೂ ಬಲಿಷ್ಠ ಮಹುಮತ ಇದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರ ನಿರ್ಮಾಣಕ್ಕೆ ಮುಂದಾದಲ್ಲಿ, ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದರು.
ಏನಿದು ಕೇಸ್​​: ಒಂದು ಕಾಲದಲ್ಲಿಮೊಘಲ್ ದೊರೆ ಬಾಬರ್ ಅವರು ಅಯೋಧ್ಯದಲ್ಲಿ 1528ರಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದ್ದರು. ಆದರೆ, ಹಿಂದೂ ಸಂಘಟನೆಗಳು ಡಿಸೆಂಬರ್ 06, 1992 ರಂದು ಬಾಬ್ರಿ ಮಸೀದಿಯನ್ನು ಕೆಡವಿದರು ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಈ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸಲು ಹಿಂದೂಪರ ಸಂಘಟನೆಗಳು ಮುಂದಾಗಿದ್ದು, ಇದಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.
ಅಲಹಬಾದ್​​ ಹೈಕೋರ್ಟ್​​ ತೀರ್ಪು: ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2010 ರಲ್ಲಿ ಅಯೋಧ್ಯೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಅಲ್ಲದೇ ಅಯೋಧ್ಯೆಯಲ್ಲಿನ ವಿವಾದಿತ ಜಾಗ(2.77 ಎಕರೆ)ದ ಮೇಲೆ ಹಿಂದೂ(ರಾಮ್ ಲಲ್ಲಾ), ಮುಸ್ಲಿಂ(ಸುನ್ನಿ ವಕ್ಫ್ ಮಂಡಳಿ) ಹಾಗೂ ನಿರ್ಮೋಹಿ ಅಖಾರಕ್ಕೆ ಸಮಾನವಾದ ಅಧಿಕಾರವಿದೆ ಎಂದು ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ ಈ ತೀರ್ಪನ್ನು ವಿರೋಧಿಸಿ ಹಿಂದೂಪರ ಸಂಘಟನೆಗಳು ಸುಪ್ರೀಂಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ಧಾರೆ.