ಜೂನ್ 17ರಂದು ರಾಷ್ಟ್ರವ್ಯಾಪಿ ವೈದ್ಯರ ಮುಷ್ಕರ: ಭಾರತೀಯ ವೈದ್ಯಕೀಯ ಸಂಸ್ಥೆ ಘೋಷಣೆ


ನವದೆಹಲಿ(ಜೂನ್ 14): ಕೋಲ್ಕತಾದ ತರಬೇತಿ ವೈದ್ಯರೊಬ್ಬರ ಮೇಲಿನ ಹಲ್ಲೆ ಘಟನೆ ಖಂಡಿಸಿ ದೇಶದ ಹಲವೆಡೆ ತೀವ್ರ ಪ್ರತಿಭಟನೆ ನಡೆಸುತ್ತಿರುವ ವೈದ್ಯ ಸಮೂಹದ ಬೆಂಬಲಕ್ಕೆ ಭಾರತೀಯ ವೈದ್ಯಕೀಯ ಸಂಸ್ಥೆ(ಐಎಂಎ) ನಿಂತಿದೆ. ಈ ಸಂಬಂಧ ಜೂನ್ 17, ಸೋಮವಾರದಂದು ದೇಶವ್ಯಾಪಿ ಮುಷ್ಕರ ನಡೆಸಲು ಐಎಂಎ ನಿರ್ಧರಿಸಿದೆ. ಇವತ್ತು ನಡೆಯುತ್ತಿರುವ ವೈದ್ಯರ ಪ್ರತಿಭಟನೆಯು ಇನ್ನೂ 2 ದಿನ ಮುಂದುವರಿಯಲಿದೆ ಎಂದೂ ವೈದ್ಯಕೀಯ ಸಂಸ್ಥೆ ತಿಳಿಸಿದೆ.
ಜೂನ್ 17ರಂದು ದೇಶದ ಬಹುತೇಕ ವೈದ್ಯರು ಬೀದಿಗಿಳಿದು ಪ್ರತಿಭಟನೆ ಮಾಡುವ ಸಾಧ್ಯತೆ ಇದೆ. ಅಂದು ಬೆಳಗ್ಗೆ 6ಗಂಟೆಯಿಂದ ತುರ್ತು ಸೇವೆಯಂತಹ ಅಗತ್ಯ ಸೇವೆಗಳನ್ನ ಹೊರತುಪಡಿಸಿ ಬಹುತೇಕ ವೈದ್ಯಕೀಯ ಸೇವೆಗಳು 24 ಗಂಟೆ ಸ್ಥಗಿತಗೊಳ್ಳಲಿವೆ. ಅಂದು ಓಪಿಡಿ ಕಾರ್ಯನಿರ್ವಹಿಸುವುದಿಲ್ಲ. ತುರ್ತು ಅಲ್ಲ, ಅಗತ್ಯ ಅಲ್ಲದ ಯಾವುದೇ ವೈದ್ಯಕೀಯ ಸೇವೆಗಳು ಅಂದು ಇರುವುದಿಲ್ಲ. ಅಂದು ನಡೆಯುವ ಬೃಹತ್ ಪ್ರತಿಭಟನೆ ಮತ್ತು ಮುಷ್ಕರದಲ್ಲಿ 3.5 ಲಕ್ಷ ವೈದ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಇವತ್ತು ಧರಣಿನಿರತ ವೈದ್ಯರಿಗೆ ಬೆಂಬಲ ಸೂಚಕವಾಗಿ ದೇಶದ ಹಲವೆಡೆ ವೈದ್ಯರು ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲ ಆಸ್ಪತ್ರೆಗಳಲ್ಲಿ ವೈದ್ಯರು ತಲೆಗೆ ಹೆಲ್ಮೆಟ್ ಧರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಶನಿವಾರ ಮತ್ತು ಭಾನುವಾರವೂ ವೈದ್ಯರ ಈ ಸಾಂಕೇತಿಕ ಪ್ರತಿಭಟನೆಗಳು ಮುಂದುವರಿಯಲಿದೆ ಎಂದು ಐಎಂಎ ತಿಳಿಸಿದೆ.

ಈ ಘಟನೆಯು ವೈದ್ಯ ಸಮೂಹವನ್ನು ಬಡಿದೆಬ್ಬಿಸಿದೆ. ಜನರನ್ನು ಬದುಕಿಸುವ ವೈದ್ಯರ ಮೇಲೆ ಅಪನಂಬಿಕೆ ಹೆಚ್ಚಾಗಿದೆ. ಅವರ ಮೇಲೆ ಹಲ್ಲೆಯಾಗುವ ಘಟನೆಗಳು ಹೆಚ್ಚಾಗಿವೆ. ನಿರ್ಭೀತಿಯಿಂದ ಚಿಕಿತ್ಸೆ ನೀಡುವಂತಹ ವಾತಾವರಣ ಕಡಿಮೆಯಾಗುತ್ತಿದೆ ಎಂಬುದು ವೈದ್ಯರ ಅಳಲಾಗಿದೆ. ತಮಗೆ ಸೂಕ್ತ ಭದ್ರತೆ ನೀಡಿ ಎಂಬ ಬೇಡಿಕೆ ಮುಂದಿಟ್ಟುಕೊಂಡು ಕೋಲ್ಕತಾದಲ್ಲಿ ವೈದ್ಯರು ಪ್ರತಿಭಟನೆ ಆರಂಭಿಸಿದ್ದರು. ಆದರೆ, ವೈದ್ಯರ ಬೇಡಿಕೆಗೆ ಮಮತಾ ಬ್ಯಾನರ್ಜಿ ಇದೂವರೆಗೂ ಮಣಿದಿಲ್ಲ. ಬದಲಾಗಿ, ಬಿಜೆಪಿ ಮತ್ತು ಕೇಂದ್ರ ಸರ್ಕಾರವು ವೈದ್ಯರ ಪ್ರತಿಭಟನೆಯ ಹಿಂದೆ ಪಿತೂರಿ ನಡೆಸಿದೆ ಎಂದು ಬಂಗಾಳ ಮುಖ್ಯಮಂತ್ರಿಗಳು ಪ್ರತ್ಯಾರೋಪ ಮಾಡಿದ್ದಾರೆ.

ಇನ್ನು, ಇವತ್ತು ಕೋಲ್ಕತಾದಲ್ಲಿ ಪ್ರತಿಭಟನಾನಿರತ ವೈದ್ಯರ ಮೇಲೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆಯೂ ಆಗಿದೆ. ಇದರಿಂದ ಕೆಲ ವೈದ್ಯರಿಗೆ ಗಾಯಗಳಾಗಿವೆ. 200ಕ್ಕೂ ಹೆಚ್ಚು ವೈದ್ಯರು ರಾಜೀನಾಮೆ ನೀಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ಧಾರೆ.

ಇದೇ ವೇಳೆ, ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ರಕ್ಷಣೆಗೆ ಭದ್ರತೆ ನಿಯೋಜಿಸಬೇಕೆಂದು ಕೋರಿ ಅಲೋಕ್ ಶ್ರೀವಾಸ್ತವ ಎಂಬ ವಕೀಲರು ಸುಪ್ರೀಂ ಕೋರ್ಟ್​ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದಾರೆ.