ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ : ಯಾರ ಲೆಕ್ಕ ಪಕ್ಕಾ? ಯಾರ ಲೆಕ್ಕ ಉಲ್ಟಾ? ಉಭಯ ಪಕ್ಷಗಳಿಗೆ ದೊರಕದ ಸ್ಪಷ್ಟ ಚಿತ್ರಣ

No comments

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ:* *ಯಾರ ಲೆಕ್ಕ ಪಕ್ಕಾ? ಯಾರ ಲೆಕ್ಕ ಉಲ್ಟಾ?* *ಉಭಯ ಪಕ್ಷಗಳಿಗೆ ದೊರಕದ ಸ್ಪಷ್ಟ ಚಿತ್ರಣ :*
 ವಿಶೇಷ ವರದಿ:  ಕೆ.ಎಂ ಇಸ್ಮಾಯಿಲ್ ಕಂಡಕರೆ*
 ಮಡಿಕೇರಿ:ರಾಜ್ಯದ ೨೮ ಕ್ಷೇತ್ರಗಳಲ್ಲಿ ಹೈವೋಲ್ಟೇಜ್ ಕ್ಷೇತ್ರದಲ್ಲಿ ಒಂದಾಗಿರುವ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಯಾರ ಕೊರಳಿಗೆ ವಿಜಯದ ಮಾಲೆ ಎಂಬ ಸ್ಪಷ್ಟ ಚಿತ್ರಣ ಉಭಯ ಪಕ್ಷದ ಅಭ್ಯರ್ಥಿಗಳಿಗೆ ದೊರೆತಿಲ್ಲ. ಮೈತ್ರಿ ಪಕ್ಷ ಹಾಗೂ ಭಾರತೀಯ ಜನತಾ ಪಕ್ಷದ ವತಿಯಿಂದ ಆಂತರಿಕ ಸಮೀಕ್ಷೆಗಳು ನಡೆಸಿದ್ದು ಇದರಲ್ಲಿ ತಮ್ಮ ಅಭ್ಯರ್ಥಿಗಳ ಗೆಲುವಿನ ಸ್ಪಷ್ಟ ಚಿತ್ರಣ ದೊರತಿಲ್ಲ ಎನ್ನುತ್ತಿದ್ದಾರೆ ಬಿಜೆಪಿ ಹಾಗೂ ಮೈತ್ರಿ ಪಕ್ಷದ ನಾಯಕರು. ಚುನಾವಣೆಯಲ್ಲಿ ಬಹಳ ಪೈಪೋಟಿ ಕಂಡು ಬಂದಿರುವ ಕ್ಷೇತ್ರವಾಗಿದೆ ಕೊಡಗು-ಮೈಸೂರು. ಬಿಜೆಪಿ ಪಕ್ಷದಿಂದ ಹಾಲಿ ಸಂಸದ ಪ್ರತಾಪ್ ಸಿಂಹ ಹಾಗೂ ಮೈತ್ರಿ ಪಾಳಯದಿಂದ ಮಾಜಿ ಸಂಸದ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಸಿ.ಎಚ್.ವಿಜಯಶಂಕರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತು. ಕ್ಷೇತ್ರದಲ್ಲಿ ಮೈತ್ರಿ ಮುಖಾಂತರ ಚುನಾವಣೆ ಎದರುಸಿರುವ ಕಾಂಗ್ರೆಸ್ ಪಕ್ಷವು , ಜಾತ್ಯತೀತ ಜನತಾದಳವು ಕ್ಷೇತ್ರದಲ್ಲಿ ಮೈತ್ರಿ ಧರ್ಮಪಾಲನೆ ಮಾಡಿಲ್ಲ ಎಂದು ಚುನಾವಣೆ ಸಂದರ್ಭದಲ್ಲೆ ಆರೋಪವನ್ನು ಮಾಡಿದ್ದರು‌. ಇದಕ್ಕೂ ಸ್ಪುಷ್ಟಿ ನೀಡುವಂತೆ ಇತ್ತೀಚೆಗೆ ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಚಿ.ಟಿ ದೇವೇಗೌಡ ಮೈಸೂರಿನಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ನೀಡಿದ್ದಾರೆ ಎಂದಿದ್ದರು‌. ಜಿ.ಟಿ.ಡಿ ಹೇಳಿಕೆಯನ್ನು ಮಾಜಿ ಸಿ.ಎಂ ಸಿದ್ದರಾಮಯ್ಯ ಅವರು ಕೂಡ ಒಪ್ಪಿದ್ದರು. ಆದರೆ ಸಿದ್ದರಾಮಯ್ಯ ಅವರು ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ವಿಶ್ವಾಸದಿಂದ ಹೇಳುತ್ತಿದ್ದಾರೆ. ಕ್ಷೇತ್ರದ ಗೆಲುವು ಸಿದ್ದರಾಮಯ್ಯ ಅವರ ಪ್ರತಿಷ್ಠಿಯಾಗಿ ಪರಿಣಮಿಸಿದೆ. *ಕೊಡಗು-ಮೈಸೂರು ಬಿಜೆಪಿ ನಾಯಕರು ಮೌನ* ಮೈತ್ರಿ ಪಾಳಯದ ನಾಯಕರಿಂದ ದ್ವಂದ್ವ ಹೇಳಿಕೆಗಳು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬರುತ್ತಿದ್ದರು ಸಹಾ ಕೊಡಗು ಹಾಗೂ ಮೈಸೂರು ಜಿಲ್ಲೆಯ ಬಿಜೆಪಿ ನಾಯಕರು ತಾವು ಗೆಲ್ಲಲಿದೆ ಎಂದು ಎಲ್ಲೂ ಕೂಡ ಹೇಳುತ್ತಿಲ್ಲ.ಬಿಜೆಪಿ ಸಂಸದ ಪ್ರತಾಪ್ ಸಿಂಹ ಚುನಾವಣೆ ಮುಗಿದ ಬಳಿಕ ಒಂದೆರಡು ಬಾರಿ ಮಾತ್ರ ಮಾಧ್ಯಮದ ಮುಂದೆ ಕಾಣಿಸಿಕೊಂಡರು. ಮೈತ್ರಿ ಅಭ್ಯರ್ಥಿ ಸಿ.ಎಚ್‌ ವಿಜಯಶಂಕರ್ ಪಕ್ಷದ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ ಅಲ್ಲದೇ ತನ್ನ ಗೆಲುವು ಖಚಿತ ಎನ್ನುತ್ತಿದ್ದಾರೆ. *ಕೊಡಗು-ಮೈಸೂರು ಕ್ಷೇತ್ರದ ಸೋಲು-ಗೆಲುವಿನ ಮೇಲೆ ಜಿ.ಟಿ.ಡಿ.ಹಾಗೂ ಸಾ.ರಾ ಭವಿಷ್ಯ* ಕ್ಷೇತ್ರದ ಸೋಲು-ಗೆಲುವಿನ ಮೇಲೆ ನಿರ್ಧಾರವಾಗಲಿದೆ ಸಿ.ಎಂ ಕುಮಾರಸ್ವಾಮಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಹಾಗೂ ಪ್ರವಾಸೋದ್ಯಮ ಸಚಿವ , ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಭವಿಷ್ಯ. ಜಿ.ಟಿ ದೇವೇಗೌಡರೆ ಸ್ವತಃ ಮೈಸೂರಿನಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರು ಬಿಜೆಪಿಗೆ ಮತ ಚಲಾಯಿಸಿದ್ದಾರೆ ಎಂದಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿ.ಟಿ.ಡಿ ಪ್ರತಿನಿಧಿಸುತ್ತಿರುವ ಚಾಮುಂಡೇಶ್ವರಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವು ೧೩ ಸಾವಿರ ಮತಗಳ ಮುನ್ನಡೆ ಸಾಧಿಸಿದ್ದರು. ಅಂದು ಜೆಡಿಎಸ್ ಪಕ್ಷವು ಪ್ರತ್ಯೇಕವಾಗಿ ಸ್ಪರ್ಧಿಸಿತು. ಈ ಬಾರಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮುಖಾಂತರ ಬಿಜೆಪಿ ಪಕ್ಷವನ್ನು ಎದುರಿಸುತ್ತಿದೆ. ಒಂದು ವೇಳೆ ಈ ಭಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕನಿಷ್ಠ ೨೫ ಸಾವಿರ ಮತಗಳ ಮುನ್ನಡೆ ಮೈತ್ರಿ ಅಭ್ಯರ್ಥಿಗೆ ಬರದಿದ್ದರೆ ,ಮೈತ್ರಿ ಅಭ್ಯರ್ಥಿ ಗೆಲುವು ಕಷ್ಟಕರ ವಿಷಯವಾಗಿದೆ. ಈಗೇನಾದರೂ ಸಂಭವಿಸಿದರೆ ಸರ್ಕಾರ ಪತನಗೊಳ್ಳದಿದ್ದರೆ ಸಿದ್ದರಾಮಯ್ಯ ಅವರು ಜಿ.ಟಿ .ಡಿ ಅವರನ್ನು ಸಂಪುಟದಿಂದ ಕೈಬಿಡಲು ಕುಮಾರಸ್ವಾಮಿ ಅವರಿಗೆ ಒತ್ತಡ ಹೇರಳಿದ್ದಾರೆ. *ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳದ ಸಾ.ರಾ.ಮಹೇಶ್* ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಾ.ರಾ ಮಹೇಶ್ ಕೆ.ಆರ್. ನಗರ ಕ್ಷೇತ್ರದ ಶಾಸಕರಾಗಿದ್ದಾರೆ. ಇವರು ಪ್ರತಿನಿಧಿಸುವ ಕ್ಷೇತ್ರ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರದಲ್ಲಿ ಸಾ.ರಾ. ಮಹೇಶ್ ಕಾಣಿಸಿಕೊಂಡಿಲ್ಲ.ಸಿ.ಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಸಾ.ರಾ ಮಹೇಶ್ ಅವರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ ಕೊಡಗು ಜಿಲ್ಲೆಯಲ್ಲೂ ಸಹಾ ಚುನಾವಣಾ ಪ್ರಚಾರದಲ್ಲಿ ಕಾಣಿಸಿಕೊಳ್ಳದೆ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. *ಬಿಜೆಪಿಗೆ ಕೊಡಗು ಆಸರೆ, ಕಾಂಗ್ರೆಸ್ ನರಸಿಂಹರಾಜ ಆಸರೆ* ಹೇಳಿ, ಕೇಳಿ , ಕಳೆದ ಎರಡು ದಶಕಗಳಿಂದ ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೋಟೆಯಾಗಿದೆ. ಜಿಲ್ಲೆಯಲ್ಲಿ ಎರಡು ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ೪೨ ಸಾವಿರ ಮತಗಳ ಮುನ್ನಡೆ ಸಾಧಿಸಿದ್ದರು. ಕೊಡಗಿನ ಮತಗಳೇ ಸಿಂಹ ಗೆಲುವಿಗೆ ಪ್ರಮುಖ ಕಾರಣ. ಕಳೆದ ಬಾರಿ ಮೈಸೂರಿನ ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಳ್ಳುವ ವೇಳೆ ಕಾಂಗ್ರೆಸ್ ಅಭ್ಯರ್ಥಿ ಎಚ್‌.ವಿಶ್ವನಾಥ್ ಅವರು ಹತ್ತು ಸಾವಿರ ಮತಗಳ ಮುನ್ನಡೆ ಸಾಧಿಸಿದ್ದರು. ಕೊಡಗು ಜಿಲ್ಲೆಯ ಎರಡು ಕ್ಷೇತ್ರದ ಮತ ಎಣಿಕೆ ಪೂರ್ಣಗೊಂಡ ವೇಳೆ ಪ್ರತಾಪ್ ಸಿಂಹ ೩೧ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿತು. ಈ ಬಾರಿ ಪ್ರತಾಪ್ ಸಿಂಹ ಕೊಡಗಿನಿಂದ ಕನಿಷ್ಠ ೬೫ ಸಾವಿರ ಮತಗಳ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದ್ದಾರೆ. ಕೊಡಗು-ಮೈಸೂರು ಕ್ಷೇತ್ರದಲ್ಲಿ ಕಾಂಗ್ರೆಸ್ ನ ಏಕೈಕ ಶಾಸಕರಿರುವ ಕ್ಷೇತ್ರವಾಗಿದೆ ನರಸಿಂಹರಾಜ ಕ್ಷೇತ್ರ. ಇಲ್ಲಿ ತನ್ವೀರ್ ಸೇಠ್ ಶಾಸಕರಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತೀ ಹೆಚ್ಚು ಮತಗಳ ಮುನ್ನಡೆ ಪಡೆದಿದ್ದು ಇದೇ ಕ್ಷೇತ್ರದಿಂದ. ಅಲ್ಪಸಂಖ್ಯಾತ ಹಾಗೂ ಹಿಂದುಳಿದ, ಕುರುಬ ಸಮುದಾಯದ ಮತಗಳು ಅತೀ ಹೆಚ್ಚು ಇರುವ ಕ್ಷೇತ್ರವಾಗಿದೆ ನರಸಿಂಹರಾಜ. ಈ ಕ್ಷೇತ್ರದಲ್ಲಿ ಈ ಬಾರಿ ಮತದಾನ ಕಡಿಮೆಯಾಗಿರುವುದು ಮೈತ್ರಿ ನಾಯಕರಿಗೆ ತಲೆ ಬಿಸಿಯಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ೪೦ ಸಾವಿರಕ್ಕೂ ಹೆಚ್ಚು ಮತಗಳ ಅಂತರವನ್ನು ಕಾಂಗ್ರೆಸ್ ಅಭ್ಯರ್ಥಿ ಪಡೆದಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷವು ಕನಿಷ್ಠ ೭೦ ಸಾವಿರ ಮತಗಳ ಮುನ್ನಡೆಯ ಪಡೆಯುವ ನೀರಿಕ್ಷೆ ಯಲ್ಲಿದೆ. ಕಾಂಗ್ರೆಸ್ ಪಕ್ಷದ ಲೆಕ್ಕಚಾರ ಪಕ್ಕಾದರೆ ಗೆಲುವು ಸಾಧಿಸುವುದರಲ್ಲಿ ಅನುಮಾನವೇ ಇಲ್ಲ. *ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತರೆ ಮೈತ್ರಿ ಸರ್ಕಾರ ಪತನ ಪಕ್ಕಾ* ಕ್ಷೇತ್ರವನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡು ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಿ.ಎಚ್.ವಿಜಯಶಂಕರ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದ ಮಾಜಿ ಸಿ‌.ಎಂ ಸಿದ್ದರಾಮಯ್ಯ ಅವರಿಗೆ ಗೆಲುವು ಅನಿವಾರ್ಯವಾಗಿದೆ.ಒಂದು ವೇಳೆ ಇಲ್ಲಿ ಕಾಂಗ್ರೆಸ್ ಪಕ್ಷವು ಸೋಲು ಕಂಡರೆ ರಾಜ್ಯದ ಮೈತ್ರಿ ಸರ್ಕಾರಕ್ಕೆ ಸಿದ್ದರಾಮಯ್ಯ ಅವರೇ ಮುಹೂರ್ತ ಫಿಕ್ಸ್ ಮಾಡುವುದರಲ್ಲಿ ಅನುಮಾನವೇ ಇಲ್ಲ. ಮತದಾರ ಕೊಟ್ಟಿರುವ ತೀರ್ಪು ಮೇ ೨೩ ರಂದು ಪ್ರಕಟಗೊಳ್ಳಲಿದೆ ಅಲ್ಲಿಯವರೆಗೆ ಕಾದುನೋಡಬೇಕಾಗಿದೆ, ಕಾವೇರಮ್ಮ ಹಾಗೂ ಚಾಮುಂಡೇಶ್ವರಿಯಮ್ಮ ಯಾರಿಗೆ ಆಶೀರ್ವಾದ ಮಾಡಿದ್ದಾಳೆ ಎಂಬುವುದನ್ನು.

No comments

Post a Comment