ಕಂಪ್ಲಿ ಗಣೇಶ್ ಅಮಾನತು ದಿಢೀರ್​ ವಾಪಸ್​ ಪಡೆದ ಕಾಂಗ್ರೆಸ್..!


ಬೆಂಗಳೂರು: ರೆಸಾರ್ಟ್​ನಲ್ಲಿ ವಿಜಯನಗರ ಶಾಸಕ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದ ಕಂಪ್ಲಿ ಶಾಸಕನಿಗೆ ಮತ್ತೊಂದು ರಿಲೀಫ್​ ಸಿಕ್ಕಿದೆ. ಶಾಸಕ ಗಣೇಶ್ ಅವರ ಅಮಾನತು ಆದೇಶವನ್ನು ಕಾಂಗ್ರೆಸ್ ಹಠಾತ್ತನೇ ಹಿಂಪಡೆದಿದೆ.
ಇಂದು ಸಂಜೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಮುನ್ನ ಅಮಾನತು ಆದೇಶ ಹಿಂಪಡೆದಿರುವ ಸಂದೇಶವನ್ನು ಕಾಂಗ್ರೆಸ್ ಪಕ್ಷ ಶಾಸಕ ಗಣೇಶ್​ಗೆ ರವಾನಿಸಿದೆ ಎಂದು ತಿಳಿದುಬಂದಿದೆ.
ಆಪರೇಷನ್ ಕಮಲದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕರು ತಮ್ಮ ಶಾಸಕರನ್ನ ಮತ್ತು ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗ್ತಿದೆ. ಸ್ವಪಕ್ಷದ ಶಾಸಕನ ಮೇಲೆಯೇ ಹಲ್ಲೆ ನಡೆಸಿ ಕಾರಾಗೃಹ ಶಿಕ್ಷೆ ಅನುಭವಿಸಿ ಬಂದಿರುವ ಶಾಸಕ ಗಣೇಶ್​ ವಿರುದ್ಧದ ಅಮಾನತು ಆದೇಶವನ್ನ ಕಾಂಗ್ರೆಸ್​ ಹಿಂಪಡೆದಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅದ್ಯಕ್ಷ ದಿನೇಶ್ ಗುಂಡೂರಾವ್ ಪರಸ್ಪರ ಚರ್ಚಿಸಿ ಶಾಸಕ ಗಣೇಶ್ ಅವರ ಅಮಾನತು ಆದೇಶವನ್ನು ವಾಪಸ್​ ಪಡೆಯಲಾಗಿದೆ ಎಂದು ಕಾಂಗ್ರೆಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತ ನಂತರ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಹೋಗಬೇಕು ಮತ್ತು ಶಾಸಕ ಗಣೇಶ್ ಅಮಾನತು ಮಾಡಿದ್ದಕ್ಕೆ ಸಿಟ್ಟಾಗಿ ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಸೇರಿಬಿಡುತ್ತಾರೆನ್ನುವ ಆತಂಕದಿಂದ ಗಣೇಶ್ ಮನವೊಲಿಕೆಗೆ ಈ ಕ್ರಮವನ್ನು ಕೈಗೊಂಡಿದೆ ಎನ್ನಲಾಗ್ತಿದೆ.
ಕಳೆದ ಫೆಬ್ರವರಿ ಬಿಡದಿಯ ರೆಸಾರ್ಟ್​ನಲ್ಲಿ ಆಪರೇಶನ್ ಕಮಲದಿಂದ ಶಾಸಕರನ್ನು ರಕ್ಷಿಸಿಕೊಳ್ಳಲು ತಂಗಿದ್ದ ಸಂದರ್ಭ ಶಾಸಕ ಗಣೇಶ್ ಅವರು ಶಾಸಕ ಆನಂದ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.​ ಬಳಿಕ ಬಂಧನಕ್ಕೊಳಗಾಗಿದ್ದ ಗಣೇಶ್​, ಇತ್ತೀಚೆಗಷ್ಟೇ ಜಾಮೀನು ಜೈಲಿನಿಂದ ಹೊರಬಂದಿದ್ದಾರೆ.