ಗುವಾಹಟಿ: ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯ ತಲೆ ಕಡಿದ ವ್ಯಕ್ತಿ ಪೊಲೀಸ್ ಠಾಣೆಗೆ ಬಂದು ಶರಣಾದ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ಭಯಾನಕ ಘಟನೆ ಎಲ್ಲರಿಗೂ ಗೊತ್ತಿದೆ. ಅಂತಹುದೇ ಬೆಚ್ಚಿ ಬೀಳಿಸುವ ಘಟನೆಯೊಂದು ಅಸ್ಸೋಂನಲ್ಲಿ ನಡೆದಿದೆ.
ಪತಿಯ ದೈಹಿಕ ಹಾಗೂ ಮಾನಸಿಕ ಚಿತ್ರಹಿಂಸೆಯಿಂದ ಬೇಸತ್ತ ಮಹಿಳೆಯೊಬ್ಬರು ಆತನನ್ನು ಕೊಂದು, ತಲೆ ಸಮೇತ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಅಸ್ಸೋಂನ ಲಖಿಂಪುರ ಜಿಲ್ಲೆಯಲ್ಲಿ ನಡೆದಿದೆ.
ಗುಣೇಶ್ವರಿ ಬರ್ಕಾಟಕಿ (48) ಎಂಬಾಕೆ ತನ್ನ ಗಂಡ ಮುಧಿರಾಂ (55) ತಲೆ ಕಡಿದು, ತಾವಿರುವ ಮಜ್ಗಾಂವನಿಂದ ಧಾಲ್ಪುರ ಪೊಲೀಸ್ ಠಾಣೆಗೆ ನಿನ್ನೆ ರಾತ್ರಿ ತಂದಿದ್ದಾರೆ. 5 ಕಿ.ಮೀ ನಡೆದು, ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಗಂಡನ ರುಂಡ ತಂದಿದ್ದ ಮಹಿಳೆಯನ್ನು ನೋಡಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಈ ಬಗ್ಗೆ ಸ್ಥಳೀಯ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಗುಣೇಶ್ವರಿ, ಆತ ಹಲವು ವರ್ಷಗಳಿಂದ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದ. ಕೊಡಲಿಯಿಂದಲೂ ಹೊಡೆದು, ಗಾಯ ಮಾಡಿದ್ದ. ಈ ಹಿಂದೆಯೇ ಅವನನ್ನು ಬಿಟ್ಟುಹೋಗುವ ಮನಸ್ಸು ಮಾಡಿದ್ದೆ, ಆದರೆ, ಮಕ್ಕಳ ಕಾರಣ ಜೊತೆಗಿದ್ದೆ. ಕೊನೆಕೊನೆಗೆ ಆತ ರಾಕ್ಷಸನಂತೆ ವರ್ತಿಸುತ್ತಿದ್ದ. ನಾನು ಅವನನ್ನು ಕೊಲ್ಲದಿದ್ದರೆ, ಅವನೇ ನನ್ನು ಕೊಂದುಬಿಡುತ್ತಿದ್ದ ಎಂದಿದ್ದಾರೆ.
ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಸೆರೆಯಾದ ಮಹಿಳೆಗೆ ಸ್ಥಳೀಯ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
