ವಯನಾಡು: ಕೇರಳಳದ ವಯನಾಡು ಲೋಕಸಭಾ ಕ್ಷೇತ್ರದಿಂದ ರಾಹುಲ್ ಗಾಂಧಿಯವರು ಇಂದು ನಾಮಪತ್ರ ಸಲ್ಲಿಸಿದರು. ಇಂದು ಬೆಳಿಗ್ಗೆ ಸೋದರಿ ಪ್ರಿಯಾಂಕಾ ಗಾಂಧಿ ಅವರೊಂದಿಗೆ ಹೆಲಿಕಾಪ್ಟರಿನಲ್ಲಿ ಆಗಮಿಸಿದ ರಾಹುಲ್ ಗಾಂಧಿ ವಯನಾಡಿನ ಕಲ್ಪೆಟ್ಟಾದಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ನಾಮಪತ್ರ ದಾಖಲೆಗಳನ್ನು ಸಲ್ಲಿಸಿದರು.
ಇದಕ್ಕೂ ಮುನ್ನ ಬೃಹತ್ ಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಧ್ವಜಗಳನ್ನು ಹಿಡಿದು ರಾಹುಲ್-ಪ್ರಿಯಾಂಕರನ್ನು ಸ್ವಾಗತಿಸಿದರು. ನಂತರ ರೋಡ್ ಶೋ ನಡೆಯಿತು. ಜಿಲ್ಲಾಧಿಕಾರಿ ಕಚೇರಿ ಸುತ್ತಲೂ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ರಾಹುಲ್ ಗಾಂಧಿಯವರು ಅಮೇಥಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಜೊತೆಜೊತೆಗೆ ಕೇರಳದ ವಯನಾಡಿನಿಂದಲೂ ಸ್ಪರ್ಧಿಸಲಿದ್ದಾರೆ ಎಂದು ಕಳೆದ ವಾರಾಂತ್ಯದಲ್ಲಷ್ಟೇ ಕಾಂಗ್ರೆಸ್ ಮುಖಂಡ, ರಾಜ್ಯಸಭಾ ಸದಸ್ಯ ಎ.ಕೆ.ಆಂಟನಿ ದೆಹಲಿಯಲ್ಲಿ ಘೋಷಿಸಿದ್ದರು.
ರಾಹುಲ್ ಬುಧವಾರ ರಾತ್ರಿ ವಯನಾಡಿನಿಂದ 73 ಕಿಲೋಮೀಟರ್ ದೂರದಲ್ಲಿರುವ ಕೋಳಿಕ್ಕೋಡ್ ನಲ್ಲಿ ವಿಮಾನದ ಮೂಲಕ ಬಂದು ತಲುಪಿದ್ದರು. ಅವರಿಗಿಂತ ಕೊಂಚ ಮುಂಚೆಯೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗೆ ಹೊಣೆ ಹೊತ್ತಿರುವ ಪ್ರಿಯಾಂಕಾ ಗಾಂಧಿ ತಲುಪಿದ್ದರು.
ಕೇರಳದ ಮಾಜಿ ಮುಖ್ಯಮಂತ್ರಿ ಒಮ್ಮೆನ್ ಚಾಂಡಿ ಮತ್ತಿತರ ಮುಖಂಡರು ಇಬ್ಬರನ್ನೂ ರಾಜ್ಯಕ್ಕೆ ಸ್ವಾಗತಿಸಿದ್ದರು.
ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುವ ವಿಷಯವು ಬಿಜೆಪಿ ಮತ್ತು ಕಮ್ಯುನಿಷ್ಟ್ ಪಕ್ಷಗಳೆರದಿಂದಲೂ ತೀವ್ರ ಟೀಕೆಗೊಳಗಾಗಿರುವುದಲ್ಲದೇ ತೀವ್ರ ವಾಗ್ಯುದ್ಧಕ್ಕೂ ಕಾರಣವಾಗಿದೆ.
ವಯನಾಡಿನಲ್ಲಿ ಏಪ್ರಿಲ್ 23ರಂದು ಚುನಾವಣೆ ನಡೆಯಲಿದ್ದರೆ ಅಮೇಥಿಯಲ್ಲಿ ಮೇ 6 ರಂದು ನಡೆಯಲಿದೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.
No comments
Post a Comment