ಮಡಿಕೇರಿಯಲ್ಲಿ ಗಮನ ಸೆಳೆದ ಮತದಾನ ಮಹತ್ವ ಕುರಿತ ಮಾಹಿತಿಯ ವಸ್ತು ಪ್ರದರ್ಶನ
ಮಡಿಕೇರಿ ಏ.೦೪ : ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮತದಾನದ ಮಹತ್ವ ಕುರಿತ ಸಂದೇಶ ಒಳಗೊಂಡ ಮಾಹಿತಿಯ ವಸ್ತುಪ್ರದರ್ಶನ ನಡೆಯಿತು.
ಚುನಾವಣಾ ಆಯೋಗದ ಸಹಯೋಗದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ವಿಶೇಷ ವಸ್ತು ಪ್ರದರ್ಶನವನ್ನು ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿಪ್ರಿಯಾ ಅವರು ವೀಕ್ಷಣೆ ಮಾಡಿದರು.
ಮತದಾರರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಚುನಾವಣೆಯ ವಿವಿಧ ಘೋಷ ವಾಕ್ಯಗಳು ಹಾಗೂ ಕಾರ್ಟೂನ್ ಚಿತ್ರಗಳನ್ನು ಬಳಸಿಕೊಂಡು ಸಿದ್ಧ್ದಪಡಿಸಿರುವ ಪ್ರಚಾರ ಫಲಕಗಳು ನೋಡುಗರ ಗಮನ ಸೆಳೆದವು.
ಮೊಬೈಲ್ ಆಪ್ ಸಿ-ವಿಜಿಲ್ ಚುನಾವಣಾ ಆಪ್ ಬಳಕೆ, ವೋಟ್ ಮಾಡಿದವನೇ ಹೀರೋ, ವಿಶೇಷಚೇತನರಿಗೆ ಸೌಲಭ್ಯ, ಮತದಾನ ಮಾಡುವುದು ಅರ್ಹರೆಲ್ಲರ ಕರ್ತವ್ಯ, ಹೀಗೆ ಹಲವು ಮತ ಜಾಗೃತಿ ಘೋಷ ವಾಕ್ಯಗಳು ಪ್ರಚಾರ ಫಲಕದಲ್ಲಿ ಮನ ಸೆಳೆದವು.
ಆಮಿಷಕ್ಕೆ ಮರುಳಾಗದಿರಿ, ವಿವೇಚನೆಯಿಂದ ಮತ ಚಲಾಯಿಸಿ, ಮಾಡಿ ಮಾಡಿ ಮತದಾನ, ಇರಲಿ ದೇಶದ ಮೇಲೆ ಅಭಿಮಾನ, ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು. ಪ್ರಜಾತಂತ್ರದಲ್ಲಿ ಮತದಾನವೇ ಹಬ್ಬ ಮತ್ತಿತರ ಸಂದೇಶಗಳು ಗಮನಸೆಳೆದವು.
ಮತದಾರರ ಜಾಗೃತಿ ವಸ್ತು ಪ್ರದರ್ಶನ ವೀಕ್ಷಣೆ ಮಾಡಿ ಮಾತನಾಡಿದ ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿಪ್ರಿಯಾ ಅವರು ಅರ್ಹ ೧೮ ವರ್ಷ ಪೂರ್ಣಗೊಂಡ ಪ್ರತಿಯೊಬ್ಬ ಮತದಾರರು ತಪ್ಪದೇ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು ಎಂದು ಅವರು ಕೋರಿದರು. ವಸ್ತು ಪ್ರದರ್ಶನವು ಗುರುವಾರಕ್ಕೆ ಕೊನೆಗೊಂಡಿತು. ಜಿ.ಪಂ.ಸಹಾಯಕ ಕಾರ್ಯದರ್ಶಿ ಮಧುಕರ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಸತೀಶ್ ಇತರರು ಇದ್ದರು.
No comments
Post a Comment