ನಿಖಿಲ್ ಹೆಸರಿಗೆ ಬಂತು 'ಮಂಡ್ಯ ಸಂಸದ' ಬೋರ್ಡ್

No comments

ಮಂಡ್ಯ, ಏಪ್ರಿಲ್ 19: ರಾಜ್ಯದಲ್ಲಿ 28 ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆ ನಡೆಯುತ್ತಿದ್ದರೂ, ಯಾವ ಕ್ಷೇತ್ರಕ್ಕೂ ಸಿಗದ ಪ್ರಚಾರ ಮತ್ತು ಮನ್ನಣೆ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ದೊರೆತಿದೆ. ಗುರುವಾರ ಮತದಾನ ಪೂರ್ಣಗೊಂಡ ಬಳಿಕವಷ್ಟೇ ಈಗ ಬೇರೆ ಕ್ಷೇತ್ರಗಳತ್ತ ಎಲ್ಲರ ಗಮನ ಹರಿಯುತ್ತಿದೆ. ಹಾಗೆಂದು ಮಂಡ್ಯದೆಡೆಗಿನ ಕುತೂಹಲ ಕಡಿಮೆಯಾಗಿಲ್ಲ. ಮತ ಎಣಿಕೆಗೆ ಇನ್ನು ಒಂದು ತಿಂಗಳು ಬಾಕಿ ಇದೆ. ಅಲ್ಲಿಯವರೆಗೂ ಮಂಡ್ಯದ ಬಿಸಿ ಆರುವುದಿಲ್ಲ.
ಮಂಡ್ಯದಲ್ಲಿ ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಗಳು ತೀವ್ರವಾಗಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲೇಬೇಕೆಂದು ಪಣತೊಟ್ಟು ಮಂಡ್ಯದಲ್ಲಿ ಪ್ರಚಾರ ನಡೆಸಿದ್ದಾರೆ. ಇದು ಅವರ ಪಾಲಿಗೆ ಅತ್ಯಂತ ಪ್ರತಿಷ್ಠೆಯ ಚುನಾವಣೆ. ಹಾಗೆಂದು ಅವರಿಗೆ ಮಂಡ್ಯದಲ್ಲಿನ ಗೆಲುವು ಸುಲಭವಲ್ಲ.ಅವರ ಎದುರು ಇರುವುದು ಪಕ್ಷೇತರ ಅಭ್ಯರ್ಥಿಯಾಗಿ ನಿಂತಿರುವ ಸುಮಲತಾ ಅಂಬರೀಷ್. ಅವರಿಗೆ ಬಿಜೆಪಿಯ ಬೆಂಬಲ ದೊರಕಿದೆ. ಕಾಂಗ್ರೆಸ್‌ನ ಅತೃಪ್ತ ಮುಖಂಡರು ಕೂಡ ಅವರೊಂದಿಗೆ ಕೈ ಜೋಡಿಸಿದ್ದಾರೆ. ಹೀಗಾಗಿ ಇಲ್ಲಿ ನಿಕಟ ಪೈಪೋಟಿ ಇದೆ.
ಆದರೆ, ಜೆಡಿಎಸ್ ಕಾರ್ಯಕರ್ತರು ಈಗಾಗಲೇ ಸಂಭ್ರಮಾಚರಣೆ ಶುರುಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿ ಗೆಲುವು ನಿಶ್ಚಿತ ಎಂದು ಖುಷಿಪಡುತ್ತಿದ್ದಾರೆ. ನಿಖಿಲ್ ಅವರು ಈಗಾಗಲೇ ಅಲ್ಲಿ ಕಚೇರಿ ಆರಂಭಿಸಲು ಸ್ಥಳ ಹುಡುಕುತ್ತಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅವರ ಹೆಸರಿನಲ್ಲಿ ನಾಮಫಲಕವನ್ನೂ ಬರೆಸಿದ್ದಾರೆ.
ಜೆಡಿಎಸ್ ಬೆಂಬಲಿಗರು ಇದನ್ನು ನೋಡಿ ಸಂಭ್ರಮಿಸುತ್ತಿದ್ದರೆ, ಸುಮಲತಾ ಅಂಬರೀಷ್ ಬೆಂಬಲಿಗರು ಅದನ್ನು ಲೇವಡಿ ಮಾಡುತ್ತಿದ್ದಾರೆ.
Source : oneindia

No comments

Post a Comment