ಮತದಾನಕ್ಕೆ ಬಂದ ಮಹಿಳೆಯರಿಗೆ ಮೇಕಪ್‌ ಕಿಟ್‌

No comments

ಪಿರಿಯಾಪಟ್ಟಣ: ತಾಲ್ಲೂಕಿನ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮತಗಟ್ಟೆಗಳಿಗೆ ಬಂದು ಉತ್ಸಾಹದಿಂದ ಮತದಾನ ಮಾಡಿದರು.
ಉಪ್ಪಾರಗೇರಿ ಮತ್ತು ಕಂಪಲಾಪುರದಲ್ಲಿ ಸಖಿ ಮತಗಟ್ಟೆ ಗಳನ್ನು ಸ್ಥಾಪಿಸಲಾಗಿತ್ತು. ಮತದಾನ ಮಾಡಲು ಬರುವ ಮಹಿಳೆಯರಿಗೆ ಮೇಕಪ್‌ ಕಿಟ್‌ಗಳನ್ನು ನೀಡಲಾಯಿತು. ಮುತ್ತೂರಿನ ರಾಜೀವ್‍ಗ್ರಾಮ, ರಾಣಿ ಗೇಟ್‌, ಅಬ್ಬಳತಿ ಹಾಡಿಗಳಲ್ಲಿ ಸಾಂಪ್ರದಾಯಿಕ ಮತಗಟ್ಟೆಗಳನ್ನು ತೆರೆಯಲಾಗಿತ್ತು. ಈ ಮತಗಟ್ಟೆಯಲ್ಲಿ ಚಪ್ಪರ ಹಾಕಿ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮತಯಂತ್ರದ ಬಳಿ ಗುಡಿಸಲು ನಿರ್ಮಿಸಲಾಗಿತ್ತು. ಮತದಾನ ಮಾಡಿ ಬಂದವರಿಗೆ ಮಜ್ಜಿಗೆ ವಿತರಿಸಲಾಯಿತು.ಶಾಸಕ ಕೆ.ಮಹದೇವ್‌ ಅವರು ಕುಟುಂಬ ಸದಸ್ಯರೊಂದಿಗೆ ಪಟ್ಟಣದ ಮತಗಟ್ಟೆ ಸಂಖ್ಯೆ 189ಕ್ಕೆ ಬಂದು ಮತ ಚಲಾಯಿಸಿದರು. ಮಾಜಿ ಶಾಸಕ ಎಚ್‍.ಸಿ.ಬಸವರಾಜು ನಂದಿನಾಥಪುರ ಗ್ರಾಮದಲ್ಲಿ ಮತ ಚಲಾಯಿಸಿದರು.ಮಾಜಿ ಶಾಸಕ ಕೆ.ವೆಂಕಟೇಶ್ ತಮ್ಮ ಸ್ವಗ್ರಾಮ ಕಿತ್ತೂರಿನ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.ಬೆಳಿಗ್ಗೆ 9 ಗಂಟೆಗೆ ಶೇ 8.32ರಷ್ಟು ಮತದಾನವಾಗಿತ್ತು. 11 ಗಂಟೆಗೆ ಶೇ 20.14ಕ್ಕೇರಿತು. ಮಧ್ಯಾಹ್ನ 1 ಗಂಟೆಗೆ ಶೇ 39.19 ಹಾಗೂ 3 ಗಂಟೆಗೆ ಶೇ 56.47 ರಷ್ಟು ಮತದಾನವಾಯಿತು. ಸಂಜೆ 5 ಗಂಟೆಗೆ ಶೇ 71.45 ರಷ್ಟು ಮತದಾನವಾಯಿತು.
ಶತಾಯುಷಿಗಳಾದ ಬಾರ್ಸೆ ಗ್ರಾಮದ ಸಿದ್ದಾಜಮ್ಮಣ್ಣಿ ಮತ್ತು ಗೌರಮ್ಮಣ್ಣಿ ಹಾಗೂ ಮೆಲ್ಲಹಳ್ಳಿ ಗ್ರಾಮದಲ್ಲಿ ಬೋರಮ್ಮ ಎಂಬುವರು ಮತ ಚಲಾಯಿಸಿದ್ದು ವಿಶೇಷವಾಗಿತ್ತು.
ಪಿರಿಯಾಪಟ್ಟಣ ತಾಲ್ಲೂಕಿನ ಸಾಲುಕೊಪ್ಪಲು ಗ್ರಾಮದಲ್ಲಿ ರಾಜಕೀಯ ಪಕ್ಷದ ಮುಖಂಡರೊಬ್ಬರು ತಮ್ಮ ಸಂಬಂಧಿಕರ ಮತಗಳನ್ನು ತಾವೇ ಚಲಾಯಿಸುತ್ತಿರುವ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ. ಸುದ್ದಿ ತಿಳಿದ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

No comments

Post a Comment