ಮಡಿಕೇರಿಯಲ್ಲಿ ಭಿಕ್ಷುಕನ ಕೊಲೆ ಆರೋಪಿ ಬಂಧನ

No comments

ಮಡಿಕೇರಿಯಲ್ಲಿ ಭಿಕ್ಷುಕನ ಕೊಲೆ : ಆರೋಪಿ ಬಂಧನ
ಮಡಿಕೇರಿ ಏ.7:
ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಬಳಿಯ ನಗರಸಭಾ ಉದ್ಯಾನವನದಲ್ಲಿ ನಡೆದ ವ್ಯಕ್ತಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂದಾಜು ೫೫ ವರ್ಷ ಪ್ರಾಯದ ವ್ಯಕ್ತಿಯೋರ್ವನ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಪ್ರಕರಣ ಶುಕ್ರವಾರ ತಡರಾತ್ರಿ ನಡೆದಿತ್ತು. ಘಟನೆ ನಡೆದ ೧೨ ಗಂಟೆಯ ಒಳಗೆ ಮಡಿಕೇರಿ ನಗರ ಪೊಲೀಸರು ಕೊಲೆ ಆರೋಪಿ ಬೇತು ಗ್ರಾಮದ ನಿವಾಸಿ ಎ.ಆರ್.ಗಣೇಶ್(೫೪) ಎಂಬಾತನನ್ನು ಬಂಧಿಸಿದ್ದಾರೆ. ಭಿಕ್ಷುಕ ರವಿ ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿಯನ್ನು ಇದೀಗ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ರವಿಯ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತಲ್ಲದೇ, ಸಾಕ್ಷಿ ನಾಶಪಡಿಸುವ ಉದ್ದೇಶದಿಂದ ಮೃತದೇಹಕ್ಕೆ ಬೆಂಕಿ ಹಚ್ಚಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ತಲೆಯ ಮೇಲೆ ಕಲ್ಲು ಎತ್ತಿಹಾಕಿದ್ದರಿಂದ ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲು ಕೂಡ ಸಾಧ್ಯವಾಗದ ರೀತಿಯಲ್ಲಿ ಮುಖ ಸಂಪೂರ್ಣವಾಗಿ ಜಜ್ಜಿ ಹೋಗಿತ್ತು.
ಶನಿವಾರ ಬೆಳಗ್ಗೆ ೭ ಗಂಟೆಯ ಸಮಯದಲ್ಲಿ ನಗರಸಭೆಯ ಸ್ವಚ್ಚತಾ ಕಾರ್ಮಿಕರು ಅತ್ತ ಕಡೆ ತೆರಳಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ವಿಷಯ ತಿಳಿಯುತ್ತಿದ್ದಂತೆಯೇ, ಮಡಿಕೇರಿ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಸುಂದರ್‌ರಾಜ್, ನಗರ ಠಾಣಾಧಿಕಾರಿ ಷಣ್ಮುಗ ಮತ್ತು ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಮೃತ ವ್ಯಕ್ತಿ ಮತ್ತು ಆತನ ಜೊತೆಗಾರ ನಗರದ ಓಂಕಾರೇಶ್ವರ ದೇವಾಲಯದ ಬಳಿ ಭಿಕ್ಷೆ ಬೇಡುತ್ತಿದ್ದು, ರಾತ್ರಿ ವೇಳೆಯಲ್ಲಿ ಡಿ.ಹೆಚ್.ಓ. ಕಚೇರಿ ಪಕ್ಕದ ಉದ್ಯಾನದಲ್ಲಿ ಮಲಗುತ್ತಿದ್ದರು. ಶುಕ್ರವಾರ ರಾತ್ರಿ ಕಂಠಪೂರ್ತಿ ಮದ್ಯ ಸೇವಿಸಿದ್ದ ಮೃತ ವ್ಯಕ್ತಿ ಮತ್ತು ಜೊತೆಗಾರನ ನಡುವೆ ಮದ್ಯದ ವಿಚಾರವಾಗಿ ಗಲಾಟೆಯಾಗಿತ್ತು ಎನ್ನಲಾಗಿದೆ. ಬಳಿಕ ಜೊತೆಗಾರ, ಮಲಗಿದ್ದ ಭಿಕ್ಷುಕನ ತಲೆಯ ಮೇಲೆ ಕಲ್ಲು ಎತ್ತಿಹಾಕಿ, ಮೃತದೇಹಕ್ಕೆ ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ. ಮೃತ ವ್ಯಕ್ತಿಯ ಜೊತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಮತ್ತೋರ್ವನಿಗಾಗಿ ಹುಡುಕಾಟ ನಡೆಸಿದ ನಗರ ಪೊಲೀಸರು, ಆತನನ್ನು ಗಣೇಶ ಎಂದು ಗುರುತಿಸಿದ್ದರು.
ನಾಪೋಕ್ಲುವಿನ ಬೇತುವಿನಲ್ಲಿದ್ದ ಗಣೇಶನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವ ವಿಚಾರವನ್ನು ಒಪ್ಪಿಕೊಂಡಿರುವುದಲ್ಲದೇ, ಮೃತ ವ್ಯಕ್ತಿಯ ಹೆಸರು ರವಿ ಎಂದು ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಎಸ್‌ಪಿ ಡಾ.ಸುಮನ್ ಪನ್ನೇಕರ್ ನಿರ್ದೇಶನದಂತೆ ಡಿವೈಎಸ್‌ಪಿ ಸುಂದರ್ ರಾಜ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಗರ ಠಾಣಾ ಪೊಲೀಸ್ ವೃತ್ತನಿರೀಕ್ಷಕ ನಾಗೇಗೌಡ, ಉಪನಿರೀಕ್ಷಕ ಷಣ್ಮುಗ, ಸಿಬ್ಬಂದಿಗಳಾದ ಕಿರಣ್, ಚರ್ಮಣ್ಣ, ನಗರ ಅಪರಾಧ ಪತ್ತೆ ದಳದ ದಿನೇಶ್ ಕೆ.ಕೆ., ಎ.ಪಿ. ಗಣಪತಿ, ನಾಗರಾಜ್ ಕಡಗಣ್ಣವರ್, ಮಹಿಳಾ ಠಾಣೆಯ ಕು.ಗಾಯತ್ರಿ ಪಾಲ್ಗೊಂಡಿದ್ದರು.

No comments

Post a Comment