ಮಡಿಕೇರಿ : ಪಾಲಂಗಾಲ ಗ್ರಾಮದ ಕಾಫಿ ಬೆಳೆಗಾರರಾದ ಲಲಿತಾ ಎಂಬುವವರ ಕೆರೆಯೊಳಗೆ ಆಯತಪ್ಪಿ ಬಿದ್ದಿದ್ದ ಕಾಡಾನೆಯ ಮರಿಯೊಂದು ಅರಣ್ಯ ಇಲಾಖೆಯ ಸಕಾಲಿಕ ಕ್ರಮದಿಂದಾಗಿ ರಕ್ಷಿಸಲ್ಪಟ್ಟಿದೆ. ಇಂದು (ತಾ.30) ಮುಂಜಾನೆ ಅಂದಾಜು 8 ವರ್ಷ ಪ್ರಾಯದ ಕಾಡಾನೆಯ ಮರಿಯೊಂದು ಲಲಿತಾರವರು ತೋಡಿಸಿದ್ದ ಹೊಸ ಕೆರೆಯೊಳಗೆ ನಿಯಂತ್ರಣ ಕಳೆದುಕೊಂಡು ಬಿದ್ದಿದೆ. ನಂತರ ಮೇಲಕ್ಕೆ ಬರಲು ಶತ ಪ್ರಯತ್ನ ನಡೆಸಿದರೂ ಫಲಕಾರಿಯಾಗದೇ ಜೀವನ್ಮರಣದ ನಡುವೆ ಒಯ್ದಾಡತೊಡಗಿದೆ. 8 ಗಂಟೆಯ ನಂತರ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕರಿಗೆ ಕೆರೆಯಲ್ಲಿ ಸಿಲುಕಿ ಜೀವ ಉಳಿಸಿಕೊಳ್ಳಲು ಯತ್ನಿಸಿ ಹೈರಾಣಾಗಿದ್ದ ಆನೆ ಮರಿ ಕಂಡುಬಂದಿದೆ. ಕೂಡಲೇ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ. ವಿಷಯವರಿತು ಸ್ಥಳಕ್ಕೆ ಧಾವಿಸಿ ಬಂದ ಆರ್.ಎಫ್.ಓ. ಗೋಪಾಲರವರ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಆನೆ ಮರಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಜೀವ ಉಳಿಸಿದ್ದಾರೆ. ನಂತರ ಅದನ್ನು ಅರಣ್ಯದೊಳಗೆ ಬಿಡಲಾಯಿತು.

No comments
Post a Comment