ಹಿರಿಯ ನಾಗರಿಕರ ವೇದಿಕೆ ವಾರ್ಷಿಕ ಸಾಮಾನ್ಯ ಸಭೆ; ಹಲವು ವಿಷಯಗಳ ಚರ್ಚೆ 


ಮಡಿಕೇರಿ ಜೂ.17(ಕರ್ನಾಟಕ ವಾರ್ತೆ):-ಹಿರಿಯ ನಾಗರಿಕರ ವೇದಿಕೆ ಇದರ ವಾರ್ಷಿಕ ಸಾಮಾನ್ಯ ಸಭೆಯು ಶನಿವಾರ ಬಾಲಭವನದಲ್ಲಿ ನಡೆಯಿತು. ವೇದಿಕೆಯ ಹಿಂದಿನ ಅಧ್ಯಕ್ಷರುಗಳು ಈ ವೇದಿಕೆ ನಡೆದು ಬಂದ ದಾರಿಯ ಬಗ್ಗೆ ಪ್ರಸ್ತಾಪಿಸಿ, ಕಾರ್ಯ ಕಲಾಪಗಳನ್ನು ವಿವರಿಸಿದರು. ಸಭೆಯಲ್ಲಿ ಕೊಡಗಿನ ಪ್ರಮುಖ ಸಮಸ್ಯೆಗಳಾದ ಆನೆ ಹಾವಳಿ, ಕಷ್ಟನಷ್ಟ, ಸಾರ್ವಜನಿಕರ ಪ್ರಾಣಕ್ಕೆ ಕುತ್ತು ಮತ್ತಿತರ ವಿಷಯಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಕಳೆದ ವರ್ಷದ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಮುಖ್ಯವಾಗಿ ಅಂಗವಿಕಲರು, ವಿಧವೆಯರು ಮತ್ತು ಹಿರಿಯ ನಾಗರಿಕರಿಗೆ ಆದ್ಯತೆ ಮೇರೆ ಮನೆಗಳನ್ನು ವಿತರಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತಿಳಿಸಲು ತೀರ್ಮಾನಿಸಲಾಯಿತು. ವೇದಿಕೆಯಲ್ಲಿ ಸ್ಥಾಪಕಾಧ್ಯಕ್ಷರಾದ ಸಿ.ಎಂ.ಮಾದಪ್ಪ, ಮಾಜಿ ಕಾನೂನು ಮಂತ್ರಿಗಳಾದ ಎಂ.ಸಿ.ನಾಣಯ್ಯ, ಉಪಾಧ್ಯಕ್ಷರಾದ ಡಿ.ಸಿ.ಲೀಲಾವತಿ, ಕಾರ್ಯದರ್ಶಿ ಪಿ.ಎಸ್.ಅರವಿಂದ ಅವರು ಉಪಸ್ಥಿತರಿದ್ದರು. ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷರಾದ ಕೊಂಗಾಂಡ ಎ.ತಿಮ್ಮಯ್ಯ ಅವರು ಸ್ವಾಗತಿಸಿದರು.