ಉತ್ತಮ ಪರಿಸರಕ್ಕಾಗಿ ಪ್ಲಾಸ್ಟಿಕ್ ಬಳಕೆಯಿಂದ ದೂರವಿರಿ: ಡಿ.ಸಿ.


 ಮಡಿಕೇರಿ ಜೂ.18(ಕರ್ನಾಟಕ ವಾರ್ತೆ):-ಉತ್ತಮ ಪರಿಸರ ಕಾಪಾಡಲು ಗಿಡ ನೆಡುವುದರ ಜೊತೆಗೆ, ಪರಿಸರ ಸಂರಕ್ಷಣೆ ಮಾಡುವುದು ಅತೀ ಮುಖ್ಯ. ಆ ನಿಟ್ಟಿನಲ್ಲಿ ಯಾರೂ ಸಹ ಪ್ಲಾಸ್ಟಿಕ್ ಬಳಸಬಾರದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕರೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಮಂಗಳವಾರ ನಡೆದ ವಿಶ್ವ ಪರಿಸರ ದಿನಾಚರಣೆ ಸಭಾ ಕಾರ್ಯಕ್ರಮದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಭವಿಷ್ಯದ ದೃಷ್ಟಿಯಿಂದ ಪ್ಲಾಸ್ಟಿಕ್‍ನ್ನು ಬಳಸಬಾರದು. ತ್ಯಾಜ್ಯವನ್ನು ಆದಷ್ಟು ಕಡಿಮೆ

ಮಾಡುವತ್ತ ಗಮನಹರಿಸಬೇಕು. ಪ್ರತೀ ದಿನವು ಪರಿಸರ ಬಗ್ಗೆ ಜಾಗೃತಿ ಇರಬೇಕು. ಜಿಲ್ಲೆಯಲ್ಲಿ ಪರಿಸರ ಮತ್ತು ಅರಣ್ಯದ ಬಗ್ಗೆ ಹೆಚ್ಚಿನ ಕಾಳಜಿಯಿರುವುದು ಶ್ಲಾಘನೀಯ ಎಂದರು. ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಅವರು ಮಾತನಾಡಿ ಪಶ್ಚಿಮಘಟ್ಟ ಪ್ರದೇಶದಲ್ಲಿ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಹೆಚ್ಚಾಗಿ ಕಾಣಬಹುದಾಗಿದೆ. ನಾಗರಹೊಳೆ ಮತ್ತು ಬಂಡೀಪುರ ವ್ಯಾಪ್ತಿಯಲ್ಲಿಯೇ 400 ಕ್ಕೂ ಹೆಚ್ಚು ಹುಲಿಗಳು ಹಾಗೂ 6 ಸಾವಿರಕ್ಕೂ ಹೆಚ್ಚು ಆನೆಗಳು ಇವೆ. ಆದರೂ ಕಳೆದ 30-40 ವರ್ಷಗಳಲ್ಲಿ ಕಾಡು ಸಹ ಕಡಿಮೆಯಾಗಿದೆ ಎಂಬುದನ್ನು ಮರೆಯುವಂತಿಲ್ಲ. ಆದ್ದರಿಂದ ಮಾನವ ಮತ್ತು ಕಾಡಾನೆ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಕಾಡಿನ ಸಂರಕ್ಷಣೆ ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದರು. ಗಿಡ, ಮರ, ಪ್ರಾಣಿ, ಪಕ್ಷಿಗಳನ್ನು ಸಂರಕ್ಷಣೆ ಮಾಡಬೇಕಿದೆ. ಹಸಿರು ಕರ್ನಾಟಕ ಕಾರ್ಯಕ್ರಮದಡಿ ಉಚಿತವಾಗಿ ಗಿಡಗಳನ್ನು ಅರಣ್ಯ ಇಲಾಖೆಯಿಂದ ನೀಡಲಾಗುವುದು. ಆ ನಿಟ್ಟಿನಲ್ಲಿ ಹೆಚ್ಚಿನ ಗಿಡಗಳನ್ನು ನೆಡಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಕರೆ ನೀಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅವರು ಮಾತನಾಡಿ ಪ್ರತಿಯೊಬ್ಬರಲ್ಲಿಯೂ

 ಪರಿಸರ ಪ್ರಜ್ಞೆ ಮತ್ತು ಕಾಳಜಿ ಇರಬೇಕು. ಪರಿಸರ ಸಂರಕ್ಷಣೆ ಕುಟುಂಬದಿಂದಲೇ ಆರಂಭವಾಗಬೇಕು ಎಂದು ಅವರು ಸಲಹೆ ಮಾಡಿದರು. ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಇಂಗುಗುಂಡಿ ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದರು. ಆಕಾಶವಾಣಿ ನಿಲಯದ ಕಾರ್ಯಕ್ರಮ ಅಧಿಕಾರಿ ವಿಜಯ ಅಂಗಡಿ ಅವರು ಮಾತನಾಡಿ ಪ್ರತಿಯೊಬ್ಬರೂ ಬೈಸಿಕಲ್ ಬಳಸುವುದರಿಂದ ವಾಯು ಮಾಲಿನ್ಯವನ್ನು ನಿಯಂತ್ರಿಸಬಹುದಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಬೈಸಿಕಲ್ ಬಳಸುವುದರಿಂದ ಶಕ್ತಿ ಹೆಚ್ಚುತ್ತದೆ, ಯೋಗ, ವ್ಯಾಯಾಮ ಮಾಡಿದಂತಾಗುತ್ತದೆ. ಆದ್ದರಿಂದ ಉತ್ತಮ ಆರೋಗ್ಯಕ್ಕೆ ಬೈಸಿಕಲ್ ಬಳಕೆ ಅಗತ್ಯ. ಪರಿಸರ ಮಾತ್ರವಲ್ಲ ದೇಹಕ್ಕೂ ಬೈಸಿಕಲ್ ಉಪಯೋಗ ಎಂದರು. ವಿಶ್ವದ 50 ರಾಷ್ಟ್ರಗಳಲ್ಲಿ ಬೈಸಿಕಲ್‍ನ್ನೇ ಯಥೇಚ್ಛವಾಗಿ ಬಳಸುತ್ತಾರೆ. ಇದರಿಂದ ಉತ್ತಮ ಪರಿಸರ ಕಾಣಬಹುದು. ಆದರೆ ನಮ್ಮ ದೇಶದಲ್ಲಿ ಶ್ರೀಮಂತಿಕೆಯನ್ನು ಹೇಳಿಕೊಳ್ಳಲು ಇಷ್ಟ ಪಡುವುದಿಲ್ಲ. ಸಾಧ್ಯವಾದಷ್ಟು ಕುಟುಂಬದಲ್ಲಿ ಕಾರು, ಬೈಕು ಇದ್ದರೂ ಬಡವರ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಪಡೆಯಲು ಹಿಂಜರಿಯುವುದಿಲ್ಲ ಎಂದರು. ತ್ಯಾಜ್ಯವನ್ನು ಮರು ಬಳಕೆ ಮಾಡಬೇಕು. ತಾರಸಿಯಲ್ಲಿ ತರಕಾರಿ ಗಿಡ ಬೆಳೆಯಬೇಕು. ತಾಜವಾದ ಆಹಾರ ಉಪಯೋಗಿಸಬೇಕು. ಇದರಿಂದ ಸಹಜ ಜೀವನ ನಡೆಸಲು ಸಾಧ್ಯ ಹೀಗೆ ಪರಿಸರ ಪೂರಕವಾಗಿ ಪ್ರತಿ ನಿತ್ಯ ಚಟುವಟಿಕೆಗಳಿದ್ದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಅವರು

ಅಭಿಪ್ರಾಯವ್ಯಕ್ತಪಡಿಸಿದರು. ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕರಾದ ಟಿ.ಜಿ.ಪ್ರೇಮ್ ಕುಮಾರ್ ಅವರು ಪರಿಸರ ಸಂಬಂಧ ಪ್ರತಿಜ್ಞಾ ವಿಧಿ ಬೋಧಿಸಿದರು. ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ಘನ ತ್ಯಾಜ್ಯ ನಿರ್ವಹಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬೇಂಗೂರು ಗ್ರಾ.ಪಂ.(ಮಡಿಕೇರಿ ತಾ), ನಂಜರಾಯಪಟ್ಟಣ(ಸೋಮವಾರಪೇಟೆ), ಕುಟ್ಟ(ವಿರಾಜಪೇಟೆ) ಗಳಿಗೆ ಬಹುಮಾನ ನೀಡಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮರಿಯ ಕ್ರಿಸ್ತರಾಜ, ಸಿಂಗ್, ಪೌರಾಯುಕ್ತರಾದ ರಮೇಶ್, ಪರಿಸರ ಅಧಿಕಾರಿ ಜಿ.ಆರ್.ಗಣೇಶನ್, ಉಪ ಪರಿಸರ ಅಧಿಕಾರಿ ಡಾ.ಸುಧಾ ಇತರರು ಇದ್ದರು. ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿದರು. ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಸ್ವಾಗತಿಸಿದರು. ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಪರಿಸರ ಜಾಗೃತಿ ಗೀತೆ ಹಾಡಿದರು. ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಮೊಹಿದ್ದೀನ್ ವಂದಿಸಿದರು.