ನಾನು ಗಿಮಿಕ್​ಗಾಗಿ ಗ್ರಾಮವಾಸ್ತವ್ಯ ಮಾಡುತ್ತಿಲ್ಲ; ಯಡಿಯೂರಪ್ಪಗೆ ಸಿಎಂ ಕುಮಾರಸ್ವಾಮಿ ಟಾಂಗ್


ಮಂಡ್ಯ (ಜೂ. 18): ಸೆಲ್ಫೀ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಂಡ್ಯದ ಕೆ.ಆರ್​. ಪೇಟೆ ತಾಲೂಕಿನ ಅಘಲಯ ಗ್ರಾಮದ ರೈತ ಸುರೇಶ್​ ಮನೆಗೆ ಆಗಮಿಸಿರುವ ಸಿಎಂ ಕುಮಾರಸ್ವಾಮಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪನವರ ವಿರುದ್ಧ ಹರಿಹಾಯ್ದಿದ್ದಾರೆ.
ನಾನು ಗಿಮಿಕ್​ಗಾಗಿ ಗ್ರಾಮವಾಸ್ತವ್ಯ ಮಾಡುತ್ತಿಲ್ಲ. ಗಿಮಿಕ್ ಅಂತ ಯಡಿಯೂರಪ್ಪ ಹೇಳುತ್ತಾರೆ. ನಾನು ಎಲ್ಲ ಜಿಲ್ಲಾಧಿಕಾರಿಗಳಿಂದ ಗ್ರಾಮಗಳ ಮಾಹಿತಿ ಪಡೆದಿದ್ದೇನೆ. ಬಿಜೆಪಿಯವರು ಗ್ರಾಮ ವಾಸ್ತವ್ಯ ಬೇಡ, ಬರ ಪರಿಹಾರ ಅಧ್ಯಯನ ಮಾಡಿ ಅಂತಾರೆ. ನಾನು ಸ್ಟಾರ್ ಹೋಟೆಲ್  ನೋಡಿದ್ದೇನೆ. ಸಣ್ಣ ಹಳ್ಳಿಯಲ್ಲೂ ವಾಸ್ತವ್ಯ ಹೂಡಿದ್ದೇನೆ ಎಂದು ಹೇಳಿದ್ದಾರೆ.
ಮೃತ ರೈತ ಸುರೇಶ್​ ತಮ್ಮೂರಿನ ಕೆರೆಗಳನ್ನು ತುಂಬಿಸುವಂತೆ ಮನವಿ ಮಾಡಿಕೊಂಡಿದ್ದರು. ಸದ್ಯದಲ್ಲೇ 213 ಕೋಟಿ ರೂ. ವೆಚ್ಚದಲ್ಲಿ ಮಂಡ್ಯ ಭಾಗದ ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಲಾಗುವುದು. ರೈತರು ಆತುರಪಟ್ಟು ಆತ್ಮಹತ್ಯೆಯ ದಾರಿ ಹಿಡಿಯಬಾರದು. ನಾನು ಹಳ್ಳಿಯ ಜನರಿಗೆ ಧೈರ್ಯ ತುಂಬಲು ಗ್ರಾಮವಾಸ್ತವ್ಯ ಮಾಡಲು ಮುಂದಾಗಿದ್ದೇನೆ ಎಂದಿದ್ದಾರೆ.
ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುರೇಶ್​ ಎಂಬ ರೈತನ ಮನೆಗೆ ಭೇಟಿ ನೀಡಿರುವ ಸಿಎಂ ಮೃತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಕೆರೆ ತುಂಬಿಸುವಂತೆ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದ ರೈತನ ಮನವಿಗೆ ಸ್ಪಂದಿಸಿ ಆಘಲಯ ಕೆರೆ ವೀಕ್ಷಣೆ ಮಾಡಿದ್ದಾರೆ. ಅವರಿಗೆ ಸಚಿವ ಸಿ.ಎಸ್​. ಪುಟ್ಟರಾಜು. ಶಾಸಕ ನಾರಾಯಣ ಗೌಡ ಸಾಥ್ ನೀಡಿದ್ದಾರೆ.