ಪ್ರಕೃತಿ ವಿಕೋಪ ನಿರ್ವಹಣೆ; ತರಬೇತಿ ಕಾರ್ಯಾಗಾರಕ್ಕೆ ಪಿ.ಶಿವರಾಜು ಚಾಲನೆ 

No comments

ಮಡಿಕೇರಿ -ಕಳೆದ ವರ್ಷ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿ, ಜೀವ ಹಾನಿಯಾಗಿದೆ. ಅದೇ ರೀತಿ ಈ ಭಾರಿಯು ಹೆಚ್ಚು ಮಳೆಯಾದರೆ, ಅದಕ್ಕೆ ಬೇಕಾದ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ, ಯುನಿಸೆಫ್ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕೊಡಗು ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ ತರಬೇತಿ ಕಾರ್ಯಾಗಾರವು ನಗರದ ಓಂಕಾರ ಸದನದಲ್ಲಿ ಮಂಗಳವಾರ ನಡೆಯಿತು. ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಪಿ.ಶಿವರಾಜು ಅವರು ಕಳೆದ ಬಾರಿ ಅತೀವೃಷ್ಟಿ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್, ರೋವರ್ಸ್ ಅಂಡ್ ರೇಂಜರ್ಸ್ ಅವರ ಸೇವೆ ಅತ್ಯಂತ ಪ್ರಶಂಸನೀಯವಾದದ್ದು. ಈ ಬಾರಿಯೂ ಅತೀವೃಷ್ಟಿ ಸಂಭವಿಸಿದಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದ್ದು, ಅಂತಹ ಸಂದರ್ಭದಲ್ಲಿ ಪರಿಹಾರ ಕೇಂದ್ರಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಸ್ವಯಂ ಸೇವಕರ ಸಹಕಾರ ಅಗತ್ಯವಿದೆ. ಆ ನಿಟ್ಟಿನಲ್ಲಿ ಸ್ವಯಂ ಸೇವಕರು ಯಾವ ರೀತಿ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಪ್ರಕೃತಿ ವಿಕೋಪ ಸಂಭವಿಸಿದಾಗ ಯಾವ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಜಿಲ್ಲಾಡಳಿತದ ವತಿಯಿಂದ ತರಬೇತಿ ನೀಡಲಾಗುತ್ತಿದ್ದು, ಪ್ರತಿಯೊಬ್ಬರು ಮುತುವರ್ಜಿ ವಹಿಸಿಕೊಂಡು ಕೆಲಸ ಮಾಡಬೇಕು. ಆಸ್ತಿ ಪಾಸ್ತಿ ಹಾನಿಯಾದರೆ ಮರಳಿ ಪಡೆಯಬಹುದು. ಆದರೆ ಜೀವ ಹಾನಿಯಾದರೆ ಪಡೆಯಲು ಸಾಧ್ಯವಿಲ್ಲ. ಇಂತಹ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅವಶ್ಯವಾಗಿದೆ ಎಂದು ಅವರು ಹೇಳಿದರು. ಯುನಿಸೆಫ್ ಜಿಲ್ಲಾ ಸಮಾಲೋಚಕರಾದ ಎಂ. ಪ್ರಭಾತ್ ಅವರು ಮಾತನಾಡಿ ಕಳೆದ ಭಾರಿ ಆದ ಪ್ರಕೃತಿ ವಿಕೋಪದ ಹಾನಿಯಿಂದ ಆದ ಪರಿಣಾಮಗಳನ್ನು ಗಮನಿಸಿ ಈ ರೀತಿಯ ಹಾನಿಗಳು ಮರುಕಳಿಸದಂತೆ ಹೇಗೆ ಸನ್ನದ್ಧರಾಗಬೇಕು ಎಂಬುದರ ಬಗ್ಗೆ ಈ ತರಬೇತಿ ನಡೆಸಲಾಗುತ್ತಿದ್ದು, ಪ್ರತಿಯೊಬ್ಬರು ತುರ್ತು ಸಂದರ್ಭದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ತಿಳಿಸಲಾಗುವುದು ಎಂದು ಅವರು ಹೇಳಿದರು. ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಆಯುಕ್ತರಾದ ಜಿಮ್ಮಿ ಸಿಕ್ವೇರಾ ಅವರು ಮಾತನಾಡಿ ಅತೀವೃಷ್ಟಿ ಉಂಟಾದ ಸಂದರ್ಭದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‍ನ ಸ್ವಯಂ ಸೇವಕರು ಕಾರ್ಯ ನಿರ್ವಹಿಸಲು ಸನ್ನದ್ದರಾಗಿದ್ದು, ಜಿಲ್ಲಾಡಳಿತ ಈಗಾಗಲೇ ಗುರುತಿಸಿರುವ ಸೂಕ್ಷ್ಮ ಪ್ರದೇಶಗಳ ಜನರ ಅಗತ್ಯಕ್ಕೆ ಅನುಗುಣವಾಗಿ ಸ್ವಯಂ ಸೇವಕರನ್ನು ತಂಡ ತಂಡವಾಗಿ ನಿಯೋಜನೆ ಮಾಡಲಾಗುವುದು ಎಂದು ಹೇಳಿದರು. ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತರಾದ ಕಾಳಪ್ಪ, ಜಿಲ್ಲಾ ಸಂಘಟಕರಾದ ದಮಯಂತಿ, ಸ್ಕೌಟ್ಸ್ ಮತ್ತು ಗೈಡ್ಸ್‍ನ ತಾಲ್ಲೂಕು ಕಾರ್ಯದರ್ಶಿ ಇತರರು ಇದ್ದರು.

No comments

Post a Comment