ದುಡಿಮೆ ಬೇಡ ,ಶಿಕ್ಷಣ ಬೇಕು.ಜೂನ್ ೧೨ ವಿಶ್ವ ಬಾಲ ಕಾರ್ಮಿಕ ಪಧ್ಧತಿ ವಿರೋಧಿ ದಿನ

No comments

✍ ಕೆ.ಎಂ ಇಸ್ಮಾಯಿಲ್ ಕಂಡಕರೆ
ಇಂದು ವಿಶ್ವ ಬಾಲ ಕಾರ್ಮಿಕ ಪಧ್ಧತಿ ವಿರೋಧಿ ದಿನವಾಗಿದೆ. ಬಾಲ್ಯವೆಂಬುದು ಬದುಕಿನ ಪ್ರಮುಖ ಘಟ್ಟ. ಅದೊಂದು ಸುಂದರ ಸ್ವಪ್ನ. ನೋಡು ನೋಡುತ್ತಿದ್ದಂತೆಯೇ ಕಣ್ಮರೆಯಾಗಿ ಬಿಡುವ ಮಧುರ ನೆನಪುಗಳನ್ನು ಅದು ಬಿಟ್ಟು ಹೋಗುತ್ತದೆ. ಮನಃ ಶಾಸ್ತ್ರಜ್ಞರ ಪ್ರಕಾರ ವ್ಯಕ್ತತ್ವದ ಮೂಲ ಲಕ್ಷಣಗಳನ್ನು ಬಾಲ್ಯದ ಆರೇಳು ವರ್ಷಗಳ ಅವಧಿಯಲ್ಲಿಯೇ ರೂಪು ಹೊಂದುತ್ತವೆ. ಮುಂದಿನ ವರ್ಷಗಳು ಕೇವಲ ಹೊಂದಾಣಿಕೆಯ ಕಾಲ ಎನ್ನಬಹುದಾಗಿದೆ. ಬಾಲ್ಯದಲ್ಲಿ ಮಕ್ಕಳ ಮನಸ್ಸಿನ ಮೇಲಾಗುವ ಒಳ್ಳೆಯ ಪರಿಣಾಮಗಳು ,ಅನುಭವಗಳು ಅವನನ್ನು ಉತ್ತಮ ನಾಗರಿಕನನ್ನಾಗಿ ರೂಪಿಸಬಹುದು. ಅಂತೆಯೇ ದುರಾದೃಷ್ಟಕರ ಬಾಲ್ಯ ಪಡೆದುಕೊಂಡ ಮಕ್ಕಳ ದುಃಖ ,ಹಿಂಸೆ, ಶೋಷಣೆ ಅವರನ್ನು ವಯಸ್ಕರಾದ ಬಳಿಕ ನಿರಂತರವಾಗಿ ಕಾಡಬಹುದು. ಸಮಾಜಘಾತುಕತನ ,ಅಪರಾಧ, ಪ್ರತೀಕಾರದಿಂದ ತತ್ತರಿಸುವ ಅನೇಕರ ಬದುಕಿನಲ್ಲಿ ಬಾಲ್ಯ ಕಾಲದಲ್ಲಿಯೇ ಅಪರಾಧಕ್ಕೆ ಬೀಜಾಂಕುರವಾಗುತ್ತದೆ. ಬಡತನವೇ ಈ ಎಲ್ಲಾ ಅನ್ಯಾಯಗಳ ಮೂಲ ನೆಲೆ. ನೂರಕ್ಕೆ ನೂರು ಬಾಲಪಾರಾಧಿಗಳು ಬಾಲ ಕಾರ್ಮಿಕರು ಹುಟ್ಟುವುದು ಬಡ ಕುಟುಂಬಗಳಲ್ಲಿ,ಎಂಬುದು ದುಃಖದ ಮಾತಾದರೂ ವಾಸ್ತವದ ವಿಚಾರ. ಹನ್ನೆರಡರಿಂದ ಹದಿನಾಲ್ಕು ವರ್ಷಗಳಿಗಿಂತ ಕೆಳಗಿನ ವಯಸ್ಸು ಬಾಲ್ಯ ಕಾಲವೆನಿಸುತ್ತದೆ. ಅನೇಕ ಬಡವರು ಈ ವಯಸ್ಸಿನ ತಮ್ಮ ಮಕ್ಕಳನ್ನು ಸಾಕಲು ಚೈತನ್ಯವಿಲ್ಲದೆ ಅವರನ್ನು ದುಡಿಯಲು ಬಿಡುತ್ತಾರೆ. ಮಗು ಆಟವಾಡಿಕೊಂಡು ಇರಬೇಕಾದ ವಯಸ್ಸಿನಲ್ಲಿ ಶಾಲೆಗೆ ಹೋಗಬೇಕಾದ ವಯಸ್ಸಿನಲ್ಲಿ ದುಡಿಮೆಗೆ ತೊಡಗಿಕೊಂಡಿರುತ್ತದೆ. ಇದೊಂದು ಅಸಹಾಯಕ ಪರಿಸ್ಥಿತಿ. ತಂದೆತಾಯಿಗಳು ತಮಗೆ ಸಹಾಯಕರಾಗಿ ಮಕ್ಕಳನ್ನು ದುಡಿಮೆಗೆ ಕರೆದೊಯ್ಯುತ್ತಾರೆ.ಈ ದುಡಿಮೆ ತಂದೆತಾಯಿಗಳ ಲೆಕ್ಕಕ್ಕೆ ಹೋಗುವುದರಿಂದ ಮಕ್ಕಳಿಗೆ ಆರ್ಥಿಕ ಪ್ರತಿಫಲವು ಸಿಗುವುದಿಲ್ಲ‌. ಒಮ್ಮೊಮ್ಮೆ ಇಂತಹ ಅನ್ಯಾಯದ ದುಡಿಮೆಯ ಕಠೋರತೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಕ್ಕಳು ಮನೆ ಬಿಟ್ಟು ಓಡಿ ಹೋಗುತ್ತಿದ್ದಾರೆ. ಕೆಟ್ಟು ಪಟ್ಟಣ ಸೇರಿ ಉದ್ಧಾರವಾಗುವ ಅವಕಾಶ ಬಡವರಿಗೆ ಇಲ್ವೇ ಇಲ್ಲ. ನಗರಗಳಲ್ಲಿ ಬೀದಿಪಾಲಾಗಿ ಅತೀ ಚಿಕ್ಕವಯಸ್ಸಿನಲ್ಲೇ ತಮ್ಮ ಪಾಡು ತಾವು ನೋಡಿಕೊಳ್ಳುತ್ತಿರುವ ಲಕ್ಷಾಂತರ ಬಾಲಕಾರ್ಮಿಕರು ನಮ್ಮ ಮಧ್ಯಯೇ ಇದ್ದಾರೆ. ದೊಡ್ಡವರ ಮೇಲ್ವಿಚಾರಣೆಯಿಲ್ಲದೇ ಕೆಟ್ಟ ಸಹವಾಸ ಸೇರಿ ದುಶ್ಟಗಳಿಗೆ ಬಲಿಯಾಗಿ ಚಿಕ್ಕಪುಟ್ಟ ಕಳ್ಳತನ ಅಥವಾ ಗಂಭೀರ ಜಾಲದಲ್ಲಿಯೂ ಸಿಲುಕಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಬಾಲ್ಯದಲ್ಲಿಯೇ ತಂದೆ ಅಥವಾ ತಾಯಿ ಇಬ್ಬರನ್ನೂ ಕಳೆದುಕೊಂಡು ಬಡ ಮಕ್ಕಳು ಬಾಲಕಾರ್ಮಿಕರಾಗುವುದುಂಟು. ತಂದೆ ತಾಯಿಗಳೇ ಮಕ್ಕಳನ್ನು ಸಾಕಲಾರದೇ ಮಾರಿಬಿಡುವ ಅಥವಾ ಜೀತಕ್ಕೆ ಇಡುವ ಸಂದರ್ಭಗಳು ಉಂಟು. ಮಳೆಯಿಲ್ಲದೇ ಬರ ಬಿದ್ದಾಗಿನ‌ ಕಠೋರ ಸಂದರ್ಭದಲ್ಲಿ ಮಕ್ಕಳನ್ನು ಮಾರಿ ಭತ್ತ ಕೊಳ್ಳಲು ಹೊರಟ ತಂದೆತಾಯಿಗಳ ದಾರುಣ ಜನಪದ ಗೀತೆಯೊಂದರಲ್ಲಿದೆ. ಬಡ ಹೆಣ್ಣುಮಕ್ಕಳ ಸ್ಥಿತಿಯಂತೂ ಕರುಣಾಜನಕವಾಗಿದೆ. ಇಂತಹ ಕೆಲವು ದುರುದೃಷ್ಟ ಹೆಣ್ಣುಮಕ್ಕಳು ಬಾಲ ವ್ಯೇಶ್ಯೆಯರಾಗಿ ಬದುಕು ಸಾಗಿಸುವ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದಿದೆ..ಇದೆಲ್ಲಾ ಕಾನೂನಿನ ದೃಷ್ಟಿಯಿಂದ ಅಪರಾಧವೆನಿಸಿದರೂ ಭ್ರಷ್ಟ ಸಮಾಜದಲ್ಲಿ ಕಾನೂ ಬಡವರ ಹಿತರಕ್ಷಣೆ ಮಾಡುವುದಿಲ್ಲ. ಅಕಸ್ಮಾತ್ ಅಲ್ಲೊಂದು, ಇಲ್ಲೊಂದು ಪ್ರಕರಣಗಳಲ್ಲಿ ಬಡ ಮಕ್ಕಳ ರಕ್ಷಣೆಯಾಗಿರಬಹುದಾದರೂ , ಹೆಚ್ಚಿನ ಪಾಲು ಬಾಲಕಾರ್ಮಿಕರು ಬಾಲ ವ್ಯೇಶ್ಯೆಯರು ಕಾನೂನಿನ ಕಣ್ಣು ತಪ್ಪಿಸಿ ಶೋಷಣೆಗೆ ಒಳಗಾಗುತ್ತಾರೆ. ಜಗತ್ತಿನ ಎಲ್ಲಾ ದೇಶಗಳಲ್ಲಿಯೂ ಬಾಲಕ-ಬಾಲಕಿಯರು ಶೋಷಣೆ ಇದೆಯಾದರೂ, ಆಫ್ರಿಕಾ, ಮತ್ತು ಏಷ್ಯಾದ ಅದರಲ್ಲಿಯೂ ಭಾರತ, ಪಾಕಿಸ್ತಾನ, ಬಾಂಗ್ಲಾ, ನೇಪಾಳ, ಇಂತಹ ದೇಶಗಳು ಬಡ ಮಕ್ಕಳ ಪಾಲಿಗೆ ನರಕದೃಷ್ಟವಾಗಿದೆ ಎಂದು ವರದಿಗಳು ನಮಗೆ ಹೇಳುತ್ತಿದೆ.. ಕೇವಲ ಬಾಲಕಾರ್ಮಿಕರನ್ನೇ ಹೆಚ್ಚಾಗಿ ನೇಮಿಸಿಕೊಳ್ಳುವ ಉದ್ಯಮಗಳುಂಟು. ಹೋಟೆಲ್, ಕಿರಾಣಿ, ಅಂಗಡಿ ಮುಂತಾದ ಕಡೆ ಸಹಾಯಕರಾಗಿ ತಟ್ಟೆ, ಲೋಟ ತೊಳೆಯಲು ಬಾಲ ಕಾರ್ಮಿಕರೇ ಬೇಕು ಎಂದು ತಿಳಿದುಕೊಂಡಿರುವ ನಿಷ್ಕುರುಣಿಗಳಿದ್ದಾರೆ. ಪಟಾಕಿ ಹಾಗೂ ಮದ್ದಿನ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಬಾಲ ಕಾರ್ಮಿಕರು ಆಗಾಗ ಕೆಲಸ ಅಪಘಾತಗಳಿಗೆ ತುತ್ತಾಗಿ ನೂರಾರು ಸಂಖ್ಯೆಯಲ್ಲಿ ಪ್ರತಿವರ್ಷ ಅಸುನೀಗುತ್ತಿದ್ದಾರೆ.. ಬಾಲ ಕಾರ್ಮಿಕ ಎಂಬ ಅನಿಷ್ಠ ಪದ್ದತಿಯನ್ನು ನಿರ್ಮೂಲನೆ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ. ಬಡವ ,ಶ್ರೀಮಂತ ಎನ್ನದೆ ಎಲ್ಲರಿಗೂ ಶಿಕ್ಷಣವನ್ನು ನೀಡಿದರೆ ಕಂಡಿತ ನಮ್ಮ ದೇಶ ಬಾಲ ಕಾರ್ಮಿಕ ಮುಕ್ತ ದೇಶವಾಗಲಿದೆ. *ಬಾಲ ಕಾರ್ಮಿಕ ಹಾಗೂ ಕಿಶೋರವಸ್ಥೆ ಕಾರ್ಮಿಕರ ಕಾಯ್ದೆಗಳು* ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ, 1986ರ ಅನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ಸಂಜ್ಞೆಯ (ವಾರೆಂಟ್ ರಹಿತ ಬಂದಿಸಬಹುದಾದ) ಅಪರಾಧವಾಗಿದೆ. 2. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರಂತೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹ ಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿನಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾರೂ. 20,000/- ರಿಂದ ರೂ. 50,000/-ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ. ಪೋಷಕರಾಗಿದ್ದಲ್ಲಿ ಲಘು ಶಿಕ್ಷಾ ಪ್ರಾವಧಾನವಿದ್ದು, ಪುನರಾವರ್ತಿತ ಅಪರಾಧಕ್ಕೆ ರೂ. 10,000/-ಗಳ ದಂಡವನ್ನು ವಿಧಿಸಬಹುದಾಗಿರುತ್ತದೆ. 3. ಗೌರವಾನ್ವಿತ ಭಾರತದ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ (ಸಿವಿಲ್) ಸಂಖ್ಯೆ 465/1986ರಲ್ಲಿ ನೀಡಿರುವ ನಿರ್ದೇಶನದನ್ವಯ ತಪ್ಪಿತಸ್ಥ ಮಾಲೀಕರು ತಾವು ನಿಯೋಜಿಸಿಕೊಂಡ ಪ್ರತಿ ಮಗುವಿಗೆ ರೂ. 20,000/-ಗಳನ್ನು ಮಕ್ಕಳ ಪುನರ್ವಸತಿ ರಚಿಸಲಾದ ಕಲ್ಯಾಣ ನಿಧಿಗೆ ಪಾವತಿಸಬೇಕಾಗಿರುತ್ತದೆ.

No comments

Post a Comment