ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಪಾತ್ರ ಮಹತ್ತರ: ಸುಮನ್ ಡಿ.ಪೆನ್ನೆಕರ್

No comments

ಮಡಿಕೇರಿ -ತೀವ್ರ ಅತಿವೃಷ್ಟಿಯಿಂದಾಗಿ ಪ್ರಕೃತಿ ವಿಕೋಪ ಸಂಭವಿಸಿದಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಬಗ್ಗೆ ಕಳೆದ ಎರಡು ದಿನಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ನಡೆದ ತರಬೇತಿ ಕಾರ್ಯಗಾರದ ಸಮಾರೋಪ ಸಮಾರಂಭ ಬುಧವಾರ ನಡೆಯಿತು. ನಗರದ ಓಂಕಾರ ಸದನದಲ್ಲಿ ನಡೆದ ಕಾರ್ಯಗಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಮಾತನಾಡಿ ಪ್ರಕೃತಿ ವಿಕೋಪ ಉಂಟಾದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‍ನ ವಿದ್ಯಾರ್ಥಿಗಳು ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವಂತಾಗಬೇಕು ಎಂದರು. ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ವಿವಿಧ

ಕಡೆಗಳಲ್ಲಿ ಸಂತ್ರಸ್ತರಿಗೆ ಅಗತ್ಯ ಸಹಕಾರ ನೀಡುವುದರ ಜೊತೆಗೆ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಅವರು ಹೇಳಿದರು. ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿದಾಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ಆ ದಿಸೆಯಲ್ಲಿ ಸಂತ್ರಸ್ತರನ್ನು ಸೂಕ್ತ ಪರಿಹಾರ ಕೇಂದ್ರಕ್ಕೆ ಕರೆ ತರುವುದು, ಬಟ್ಟೆ ಇತರ ವಸ್ತುಗಳನ್ನು ನೀಡುವುದು, ಔಷಧೋಪಚಾರ ಕೊಡಿಸುವುದು ಹೀಗೆ ಹಲವು ಕಾರ್ಯಗಳನ್ನು ಮಾಡಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ತಿಳಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಮಚ್ಚಾಡೋ ಅವರು ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್‍ನ ಸಮವಸ್ತ್ರದಲ್ಲಿ ನೋಡಿದಾಗ ಗೌರವ ಬರುತ್ತದೆ. ಒಂದು ತಂಡೋಪಾದಿಯಾಗಿ ಕಾರ್ಯನಿರ್ವಹಿಸುವುದು ಶ್ಲಾಘನೀಯ ಎಂದರು. ಕಳೆದ ಎರಡು ದಿನಗಳಿಂದ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಕೊಡಗು, ಮೈಸೂರು, ದಕ್ಷಿಣ ಕನ್ನಡ, ಹಾಸನ, ಚಾಮರಾಜನಗರ, ಮಂಡ್ಯ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಬೆಳಗಾವಿ ಜಿಲ್ಲೆಯ ನೂರಕ್ಕೂ ಹೆಚ್ಚು ಸ್ಕೌಟ್ಸ್ ಮತ್ತು ಗೈಡ್ಸ್ ಪದವಿ ವಿದ್ಯಾರ್ಥಿಗಳು, ಶಿಕ್ಷಕರು, ಇತರರು ಭಾಗವಹಿಸಿದ್ದರು. ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತರಾದ ಕಿಟ್ಟು ಕಾಳಪ್ಪ, ಜಿಲ್ಲಾ ಆಯುಕ್ತರಾದ ಜಿಮ್ಮಿ ಸೀಕ್ವೆರಾ, ಸಮಾಲೋಚಕರಾದ ಪ್ರಭಾತ್ ಕಲ್ಕೂರ, ವನಿತ್ ಕುಮಾರ್, ದಮಯಂತಿ, ಇತರರು ಇದ್ದರು.

No comments

Post a Comment