ಮಧ್ಯಪ್ರದೇಶ,(ಜೂ.22): ಜಮೀನು ಅಥವಾ ಭೂಮಿಗಾಗಿ ಅಪ್ಪ-ಮಕ್ಕಳ ನಡುವೆ, ಅಣ್ಣ-ತಮ್ಮಂದಿರ ನಡುವೆ ಜಗಳ-ಕೊಲೆಗಳು ನಡೆಯುತ್ತವೆ. ಇಲ್ಲೂ ಸಹ 2 ಅಡಿ ಭೂಮಿ ವಿಚಾರವಾಗಿ ನಡೆದ ಜಗಳದಲ್ಲಿ ಒಂದು ಕುಟುಂಬವೇ ನಾಶವಾಗಿದೆ. ಸಂಬಂಧಿಕರೇ ಕುಟುಂಬದ ಐದು ಜನರನ್ನೂ ಗುಂಡು ಹೊಡೆದು ಸಾಯಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ಸಾಗರ ಜಿಲ್ಲೆಯಲ್ಲಿ ನಡೆದಿದೆ.
ಮನೋಜ್ ಅಹಿರ್ವಾರ್(45), ಸಂಜೀವ್ ಅಹಿರ್ವಾರ್(35), ತಾರಾಬಾಯಿ(55), ರಾಜಕುಮಾರಿ(30), ಯಶವಂತ್(12) ಸಾವನ್ನಪ್ಪಿದವರು. ಮನೋಜ್ ಅಹಿರ್ವಾರ್ ಮತ್ತು ಸಂಜೀವ್ ಅಹಿರ್ವಾರ್ ಇಬ್ಬರೂ ಅಣ್ಣ-ತಮ್ಮಂದಿರು. ಇವರು ಭೋಪಾಲ್ನಿಂದ 150 ಕಿ.ಮೀ ದೂರದಲ್ಲಿರುವ ಬಿನಾ ನಗರದಲ್ಲಿ ವಾಸವಿದ್ದರು.
ಎರಡು ದಿನಗಳ ಹಿಂದೆ ಈ ಸಹೋದರರ ಚಿಕ್ಕಪ್ಪ ಮನೋಹರ್ ಅಹಿರ್ವಾರ್ ಸಂಜೀವ್ ಮನೆಗೆ ಬಂದಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿದ್ದು, ನಿಮ್ಮ ಕುಟುಂಬಕ್ಕೆ ಸೇರಿದ 2 ಅಡಿ ಜಾಗ ಕೊಡಿ ಎಂದು ಮನೋಹರ್ ಕೇಳಿದ್ದಾರೆ. ಆದರೆ ಸಹೋದರರಾದ ಮನೋಜ್ ಹಾಗೂ ಸಂಜೀವ್ ಜಾಗ ಬಿಟ್ಟುಕೊಡಲು ಒಪ್ಪಲಿಲ್ಲ. ಬಳಿಕ ಇಬ್ಬರ ನಡುವೆ ವಾದ-ವಿವಾದಗಳು ನಡೆದು ಪರಿಸ್ಥಿತಿ ತಾರಕಕ್ಕೇರಿದೆ.
ಈ ವೇಳೆ ಮನೋಹರ್ ಅಹಿರ್ವಾರ್ ಮಕ್ಕಳಾದ ಪ್ರವೀಣ್ ಮತ್ತು ಪ್ರಶಾಂತ್ ಮನೆಗೆ ಬಂದು ಸಂಜೀವ್ ಕುಟುಂಬಸ್ಥರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಒಬ್ಬ ಬಾಲಕ ಸೇರಿದಂತೆ ಐವರೂ ಮೃತಪಟ್ಟಿದ್ದಾರೆ. ಈ ಘಟನೆ ನಡೆದ ವೇಳೆ ಮತ್ತೊಬ್ಬ ಮಹಿಳೆ ಹಾಗೂ ಇಬ್ಬರು ಮಕ್ಕಳು ರೂಮ್ ಒಂದರಲ್ಲಿ ಇದ್ದರು. ಇದರಿಂದಾಗಿ ಆ ಮೂವರ ಜೀವ ಉಳಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಆರೋಪಿ ಮನೋಹರ್ ಅಹಿರ್ವಾರ್ನನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ಪಿಸ್ತೂಲ್ನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ಇಬ್ಬರು ಮಕ್ಕಳು ಪರಾರಿಯಾಗಿದ್ದಾರೆ. ಮೂವರ ವಿರುದ್ಧವೂ ದೂರು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಪೊಲೀಸರು ತಲೆ ಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ.

No comments
Post a Comment