ವಿರಾಜಪೇಟೆ: ಮನೆಗೆ ಮರಬಿದ್ದು ಗೃಹಿಣಿ ಮೃತ್ಯು 



ಕೊಡಗು, ಮೇ 31: ಭಾರೀ ಗಾಳಿಮಳೆಗೆ ಬೃಹತ್ ಮರವೊಂದು ಮನೆ ಮೇಲೆ ಉರುಳಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಸಮೀಪದ ತಾರಿಕಟ್ಟೆ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಮೃತರನ್ನು ತಾರಿಕಟ್ಟೆಯ ನೌಶಾದ್ ಎಂಬವರ ಪತ್ನಿ ರೈಹಾನತ್(23) ಎಂದು ಗುರುತಿಸಲಾಗಿದೆ. ಪತಿ ನೌಶಾದ್‌ರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿರಾಜಪೇಟೆಯ ಬಹುತೇಕ ಕಡೆಗಳಲ್ಲಿ ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಭಾರೀ ಗಾಳಿಮಳೆ ಸುರಿದಿದೆ. ಈ ವೇಳೆ ಬೃಹತ್ ಮರವೊಂದು ನೌಶಾದ್ ಅವರ ಮನೆ ಮೇಲೆ ಉರುಳಿಬಿದ್ದಿದೆ. ಈ ವೇಳೆ ಮನೆಯ ಕೋಣೆಯೊಳಗೆ ಮಲಗಿದ್ದ ನೌಶಾದ್ ದಂಪತಿಯ ಮೇಲೆ ಛಾವಣಿ ಕುಸಿದುಬಿದ್ದಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ರೈಹಾನತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ನೌಶಾದ್ ಅವರಿಗೂ ಗಂಭೀರ ಗಾಯಗಳಾಗಿವೆ. ನೌಶಾದ್ ಅವರ ಎರಡು ವರ್ಷದ ಪುತ್ರ ಹಾಗೂ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.