ಐಸಿಸಿ ವಿಶ್ವಕಪ್ ಕ್ರಿಕೆಟ್: ಇಂಗ್ಲೆಂಡ್ 311 ರನ್


ಲಂಡನ್, ಮೇ 30: ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕ ವಿರುದ್ಧ ಗುರುವಾರ ನಡೆದ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 311 ರನ್ ಗಳಿಸಿದೆ. ಟಾಸ್ ಜಯಿಸಿದ ದ.ಆಫ್ರಿಕದ ನಾಯಕ ಎಫ್‌ಡು ಪ್ಲೆಸಿಸ್ ಇಂಗ್ಲೆಂಡ್‌ನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಬೆನ್‌ಸ್ಟೋಕ್ಸ್(89), ಜೇಸನ್ ರಾಯ್(54), ಇಯಾನ್ ಮೊರ್ಗನ್(57)ಹಾಗೂ ಜೋ ರೂಟ್(51) ಸಂಘಟಿತ ಪ್ರದರ್ಶನದಿಂದ ಇಂಗ್ಲೆಂಡ್ ತಂಡ ದ.ಆಫ್ರಿಕದ ಗೆಲುವಿಗೆ ಸ್ಪರ್ಧಾತ್ಮಕ ಗುರಿ ನೀಡಿತು. ದಕ್ಷಿಣ ಆಫ್ರಿಕದ ಪರ ವೇಗದ

ಬೌಲರ್ ಲುಂಗಿ ಗಿಡಿ(3-66) ಯಶಸ್ವಿ ಬೌಲರ್ ಎನಿಸಿಕೊಂಡರೆ, ಇಮ್ರಾನ್ ತಾಹಿರ್(2-61) ಹಾಗೂ ಕಾಗಿಸೊ ರಬಾಡ(2-66)ತಲಾ 2 ವಿಕೆಟ್ ಪಡೆದರು. ದಕ್ಷಿಣ ಆಫ್ರಿಕ ಮೊದಲ ಓವರ್‌ನ 2ನೇ ಎಸೆತದಲ್ಲಿ ಆರಂಭಿಕ ಆಟಗಾರ ಬೈರ್‌ಸ್ಟೋವ್(0) ವಿಕೆಟನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ಆಗ 2ನೇ ವಿಕೆಟ್‌ಗೆ 106 ರನ್ ಜೊತೆಯಾಟ ನಡೆಸಿದ ರಾಯ್ ಹಾಗೂ ರೂಟ್ ತಂಡವನ್ನು ಆಧರಿಸಿದರು. ಸ್ಟೋಕ್ಸ್(89, 79 ಎಸೆತ, 9 ಬೌಂಡರಿ) ತಂಡದ ಪರ ಸರ್ವಾಧಿಕ ಸ್ಕೋರ್ ಗಳಿಸಿದರು.