ಬೆಂಗಳೂರು : ಮೊಬೈಲ್ ನೀಡಲು ಹೋದಾಗ ರಾಹುಲ್ ಎಂಬ ಗ್ರಾಹಕ ನನ್ನನು ಯಾಮಾರಿಸಿ ಮೊಬೈಲ್ ಎಗರಿಸಿದ್ದಾರೆ ಎಂದು ಫ್ಲಿಪ್ಕಾರ್ಟ್ ಡೆಲಿವರಿ ಬಾಯ್ ಆರೋಪಿಸಿದ್ದಾನೆ.
ರಾಹುಲ್ ಎಂಬಾತ ಫ್ಲಿಪ್ಕಾರ್ಟ್ನಲ್ಲಿ 50 ಸಾವಿರ ಬೆಲೆಯ ಐ ಫೋನ್ ಬುಕ್ ಮಾಡಿದ್ದ. ಹೀಗಾಗಿ ಫ್ಲಿಫ್‌ಕಾರ್ಟ್ ಡೆಲಿವರಿ ಬಾಯ್ ಮೊಬೈಲ್ ನೀಡಲು ರಾಹುಲ್ಗೆ ಕರೆ ಮಾಡಿದಾಗ ಆರ್. ಆರ್. ನಗರ ಬಳಿ ಇರುವ ಶೆಲ್ ಪೆಟ್ರೋಲ್ ಬಂಕ್ಗೆ ಬರುವಂತೆ ಹೇಳಿದ್ದಾನೆ.
ಮೊಬೈಲ್ ತೆಗೆದುಕೊಳ್ಳಲು ಬಂದ ರಾಹುಲ್ ಮತ್ತು ಇನ್ನಿತರ ಸ್ನೇಹಿತರು, ಮೊದಲು ಮೊಬೈಲ್ ತೆಗೆದುಕೊಂಡು ನೋಡಿದ್ದಾರೆ. ನಂತರ ಹಣ ಕಡಿಮೆ ಇದೆ ಫ್ಲಿಪ್ಕಾರ್ಟ್ ಆಫೀಸ್ಗೆ ಬಂದು ತೆಗೆದುಕೊಳ್ಳುತ್ತೇನೆ ಎಂದು ಬಾಕ್ಸ್ ಕೊಟ್ಟು ಅಲ್ಲಿಂದ ವಾಪಸ್ ಹೋಗಿದ್ದಾರೆ.
ಡೆಲಿವರಿ ಬಾಯ್ ಆಫೀಸ್ ಹೋಗಿ ನೋಡಿದಾಗ ಐ ಫೋನ್ ಬದಲು ಕಲ್ಲು ಇರುವುದು ಬೆಳಕಿಗೆ ಬಂದಿದೆ. ರಾಹುಲ್ ಅಂಡ್ ಟೀಂ ಗಮನ ಬೇರೆಡೆ ಸೆಳೆದು ಮೊಬೈಲ್ ತೆಗೆದು ಕಲ್ಲಿಟ್ಟು ಯಾಮಾರಿಸಿದ್ದಾರೆ ಎಂದು ಡೆಲಿವರಿ ಬಾಯ್ ಬಸವರೆಡ್ಡಿ ಆರೋಪಿಸಿದ್ದಾರೆ. ಈ ಸಂಬಂಧ ಕೆಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
