ಕರಾಚಿ(ಮೇ.21): ಪಾಕಿಸ್ತಾನ ವಿಶ್ವಕಪ್ ತಂಡದಿಂದ ಹೊರಬಿದ್ದ ಎಡಗೈ ವೇಗಿ ಜುನೈದ್ ಖಾನ್ ಮೌನ ಪ್ರತಿಭಟನೆ ನಡೆಸಿದ್ದಾರೆ. ಬಾಯಿಗೆ ಕಪ್ಪು ಟೇಪ್ ಅಂಟಿಸಿಕೊಂಡಿರುವ ಫೋಟೋವನ್ನು ಟ್ವೀಟರ್‌ನಲ್ಲಿ ಹಾಕಿ 'ನಾನು ಏನನ್ನೂ ಹೇಳಲು ಬಯಸುವುದಿಲ್ಲ. ಸತ್ಯ ಯಾವಾಗಲು ಕಹಿ' ಎಂದು ಬರೆದಿದ್ದಾರೆ. ಆ ಬಳಿಕ ಟ್ವೀಟ್ ಅಳಿಸಿ ಹಾಕುವ ಮೂಲಕ ವಿವಾದವಾಗುವ ಮುನ್ನ ಎಚ್ಚೆತ್ತುಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಭಾನುವಾರ ಮುಕ್ತಾಯಗೊಂಡ ಸರಣಿಯಲ್ಲಿ ಒಟ್ಟು 2 ಪಂದ್ಯಗಳನ್ನು ಆಡಿದ ಜುನೈದ್ 18 ಓವರ್ ಬೌಲ್ ಮಾಡಿ 7.88ರ ಸರಾಸರಿಯಲ್ಲಿ 142 ರನ್ ಚಚ್ಚಿಸಿಕೊಂಡಿದ್ದರು. ಕಳಪೆ ಪ್ರದರ್ಶನ ತೋರಿದ್ದಕ್ಕಾಗಿ ಅವರನ್ನು ತಂಡದಿಂದ ಕೈಬಿಡಲಾಯಿತು ಎಂದು ಪಾಕ್ ಕ್ರಿಕೆಟ್ ಮಂಡಳಿ ಮೂಲಗಳು ತಿಳಿಸಿವೆ.

No comments
Post a Comment