ಎಸ್ಸೆಸ್ಸೆಲ್ಸಿ ಪರೀಕ್ಷೆ; ಪ್ರಕೃತಿ ವಿಕೋಪ ನಡುವೆಯೂ ಮಡಿಕೇರಿ ತಾಲ್ಲೂಕಿನಲ್ಲಿ ಉತ್ತಮ ಫಲಿತಾಂಶ
ಮಡಿಕೇರಿ ಮೇ,06(ಕರ್ನಾಟಕ ವಾರ್ತೆ):-ಎಸ್‍ಎಸ್‍ಎಲ್‍ಸಿ ಪರೀಕ್ಷೆ ಸಂಬಂಧಿಸಿದಂತೆ ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 1996 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಒಟ್ಟು 1474 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.73.85 ಫಲಿತಾಂಶ ಪಡೆದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ತಿಳಿಸಿದ್ದಾರೆ.
ತಾಲ್ಲೂಕಿನಲ್ಲಿ ಒಟ್ಟು 5 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದು, 11 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಎರಡು ಪ್ರೌಢಶಾಲೆಗಳು ಸರ್ಕಾರಿ ಪ್ರೌಢಶಾಲೆ ಮಕ್ಕಂದೂರು, ಸರ್ಕಾರಿ ಪ್ರೌಢಶಾಲೆ ಚೆಂಬು, ಶೇ.100ರಷ್ಟು ಫಲಿತಾಂಶ ದಾಖಲಿಸಿವೆ. ತಾಲ್ಲೂಕಿನ ಗಡಿಯಲ್ಲಿರುವ ಸರ್ಕಾರಿ ಪ್ರೌಢಶಾಲೆ ಚೆಂಬು ಶಾಲೆಯಲ್ಲಿ ಒಟ್ಟು 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 8 ವಿದ್ಯಾರ್ಥಿಗಳು ಉನ್ನತ ದರ್ಜೆ ಪಡೆದು ತೇರ್ಗಡೆಯಾಗಿದ್ದಾರೆ. ಉಳಿದ 14 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಸರ್ಕಾರಿ ಪ್ರೌಢಶಾಲೆ ಕರಿಕೆ ಶೇ.95, ಸರ್ಕಾರಿ ಪ್ರೌಢ ಶಾಲೆ, ಗಾಳಿಬೀಡು ಶೇ.91, ಸರ್ಕಾರಿ ಪ್ರೌಢ ಶಾಲೆ ಕಡಗದಾಳು ಶೇ.81 ರಷ್ಟು ಫಲಿತಾಂಶ ಪಡೆದುಕೊಂಡಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅವರು ಹೇಳಿದ್ದಾರೆ.
ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ಮಾರುತಿ ಪ್ರೌಢಶಾಲೆ ಮೂರ್ನಾಡು, ಜ್ಞಾನಜ್ಯೋತಿ ಪ್ರೌಢಶಾಲೆ ಮೂರ್ನಾಡು, ಶ್ರೀಕೃಷ್ಣ ವಿದ್ಯಾಮಂದಿರ ಸಿದ್ದಾಪುರ ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿದ್ದು, ಚೆಟ್ಟಳ್ಳಿ ಪ್ರೌಢಶಾಲೆ ಶೇ.97.44, ಮೂರ್ನಾಡು ಪ್ರೌಢಶಾಲೆ ಶೇ.94.81, ಉದಯ ಪ್ರೌಢಶಾಲೆ ಬೆಟ್ಟಗೇರಿ ಶೇ.94.12, ಜ್ಯೋತಿ ಪ್ರೌಢಶಾಲೆ ಪೆರಾಜೆ ಶೇ.91.89, ಫಲಿತಾಂಶ ಪಡೆದುಕೊಂಡಿವೆ.
ಎರಡು ಸರ್ಕಾರಿ ಪ್ರೌಢಶಾಲೆಗಳು ಹಾಗೂ ಮೂರು ಅನುದಾನಿತ ಪ್ರೌಢಶಾಲೆಗಳು ಶೇ.40 ಕ್ಕಿಂತ ಫಲಿತಾಂಶವನ್ನು ಪಡೆದಿವೆ. ಸಂತ ಅನ್ನಮ್ಮ ಪ್ರೌಢಶಾಲೆ ಸಿದ್ದಾಪುರ ಶೇ.98.39, ರಾಜರಾಜೇಶ್ವರಿ ಪ್ರೌಢಶಾಲೆ ಶೇ.97.14, ಇಕ್ರಾ ಪಬ್ಲಿಕ್ ಶಾಲೆ ಶೇ.96.67, ಶ್ರೀ ರಾಮ ಟ್ರಸ್ಟ್ ಶಾಲೆ ನಾಪೋಕ್ಲು ಶೇ.93.85 ರಷ್ಟು ಫಲಿತಾಂಶವನ್ನು ಪಡೆದಿವೆ.
ಕುಮಾರಿ ಮೌನ ಸಂತ ಜೋಸೆಫರ ಪ್ರೌಢಶಾಲೆ ಮಡಿಕೇರಿಯ ಈ ವಿದ್ಯಾರ್ಥಿನಿ 611/625 ಅಂಕಗಳನ್ನು ಪಡೆದು ತಾಲ್ಲೂಕಿಗೆ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿನಿಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ವರ್ಷ ಅತಿವೃಷ್ಟಿಯಿಂದ ಕೊಡಗಿನಲ್ಲಿ ಬೆಟ್ಟಗುಡ್ಡಗಳ ಕುಸಿತ, ನೈಸರ್ಗಿಕ ವಿಕೋಪದಿಂದಾದ ಅನಾಹುತಗಳಿಂದ ವಿಚಲಿತರಾಗದಂತೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ಶ್ರಮವನ್ನು ಸ್ಮರಿಸಬಹುದಾಗಿದೆ.
ಅತಿವೃಷ್ಠಿಯಂತಹ ಕಷ್ಟಕಾಲದಲ್ಲಿ ವಿದ್ಯಾರ್ಥಿಗಳಿಗೆ ಧನಸಹಾಯ, ಲೇಖನ ಸಾಮಗ್ರಿಗಳು, ಶೈಕ್ಷಣಿಕ ಪರಿಕರಗಳು ಹಾಗೂ ಕಲಿಕಾ ಸಾಮಗ್ರಿಗಳನ್ನು ಸಕಾಲದಲ್ಲಿ ಒದಗಿಸಿಕೊಟ್ಟು ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಸಹಕರಿಸಿದ ಸ್ವಯಂ ಸೇವಾ ಸಂಸ್ಥೆಗಳು, ದಾನಿಗಳು ಸಂಘ ಸಂಸ್ಥೆಗಳ ನೆರವನ್ನು ಶಿಕ್ಷಣ ಇಲಾಖೆ ಕೃತಜ್ಞತೆಯಿಂದ ಸ್ಮರಿಸುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅವರು ತಿಳಿಸಿದ್ದಾರೆ.


No comments
Post a Comment