ಮಡಿಕೇರಿ ಮೇ 6 :
ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ದೇಶಕ್ಕಾಗಿ ಹುತಾತ್ಮರಾದ ರಾಜೀವ್ ಗಾಂಧಿಯವರು ಇಡೀ ವಿಶ್ವಮನು ಕುಲಕ್ಕೆ ಮಾದರಿಯಾಗಿದ್ದಾರೆ. ಅವರು ಪ್ರಧಾನಿಯಾಗಿ ನಿಷ್ಕಳಂಕ ಹಾಗೂ ಪಾರದರ್ಶಕ ಆಡಳಿತ ನೀಡಿರುವುದು ಇಂದಿಗೂ ಅವಿಸ್ಮರಣೀಯ. ಹತ್ತು ಹಲವು ಆಧುನಿಕ ಯೋಜನೆಗಳನ್ನು ಜಾರಿಗೆ ತಂದು ಭಾರತ ವಿಶ್ವ ಗುರುವಿನ ಸ್ಥಾನ ಪಡೆಯಲು ನಾಂದಿ ಹಾಡಿದ್ದರು. ಮಾದರಿ ಆಡಳಿತ ನೀಡಿದ ನಿಷ್ಠಾವಂತ ಆಡಳಿತಗಾರನ ವಿರುದ್ಧ ಇಲ್ಲಸಲ್ಲದ ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದ್ದಾರೆ.
ಆಹಾರ ಮಿಷನ್, ಶೈಕ್ಷಣಿಕ ಮಿಷನ್ ಮುಂತಾದವುಗಳನ್ನು ಪರಿಚಯಿಸಿ ದೇಶಕ್ಕೆ ಭದ್ರ ಬುನಾದಿ ಹಾಕಿದ್ದರು. ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಧೃಡಗೊಳಿಸಿದ ಕೀರ್ತಿ ಕೂಡ ರಾಜೀವ್ ಗಾಂಧಿಯವರಿಗೆ ಸಲ್ಲುತ್ತದೆ. ತಮ್ಮ ಪ್ರಾಣಕ್ಕೆ ಅಪಾಯವಿದೆ ಎಂದು ತಿಳಿದಿದ್ದರೂ ನನ್ನ ದೇಶದ ಜನರನ್ನು ಸಂಶಯದಿಂದ ಕಾಣಬಾರದು ಎಂಬುದನ್ನು ಮನಗಂಡು ದೇಶಕ್ಕಾಗಿ ಪ್ರಾಣರ್ಪಣೆ ಮಾಡಿದ ದೇಶ ಪ್ರೇಮಿ. ಇಂತಹ ಮೇರು ವ್ಯಕ್ತಿತ್ವದ ರಾಜೀವ್ ಅವರ ಬಗ್ಗೆ ಕೀಳು ಮಟ್ಟದ ಪದ ಬಳಕೆ ಮಾಡಿ ಈ ದೇಶದ ಪ್ರಧಾನಮಂತ್ರಿ ಮೋದಿಯವರು ತಮ್ಮ ಹುದ್ದೆಗೆ ಕಳಂಕ ತಂದಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಯಾವುದೇ ಜನಪರ ಯೋಜನೆಗಳನ್ನು ಜಾರಿಗೊಳಿಸದೇ ಇರುವುದು ಮತ್ತು ನೋಟು ಅಮಾನಿಕರಣ, ಜಿಎಸ್‍ಟಿ ತೆರಿಗೆ ಜಾರಿ ಗೊಳಿಸಿರುವುದು, ವಿದೇಶದಿಂದ ಕಪ್ಪುಹಣ ತರಲು ವಿಫಲರಾಗಿರುವುದು, ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಧ್ವಂಧ್ವನೀತಿ ಪ್ರದರ್ಶನ, ಗಂಗಾ ಶುದ್ಧೀಕರಣವಾಗದೆ ಇರುವುದು, ಬಡವರ ಖಾತೆಗೆ 15 ಲಕ್ಷ ಹಾಕದೆ ಇರುವುದು ಪ್ರಧಾನಿ ಮೋದಿ ಅವರ ಹಿನ್ನಡೆಗೆ ಕಾರಣವಾಗಿದೆ. ಸೋಲಿನ ಭೀತಿಯಿಂದ ಹತಾಶರಾಗಿರುವ ಅವರು ಧೀಮಂತ ನಾಯಕತ್ವದ ರಾಜೀವ್ ಗಾಂಧಿ ಅವರ ವಿರುದ್ಧ ಹೇಳಿಕೆ ನೀಡುವ ಮೂಲಕ ಕ್ಷುಲ್ಲಕ ರಾಜಕಾರಣ ಪ್ರದರ್ಶಿಸಿದ್ದಾರೆ ಎಂದು ಮೈನಾ ಆರೋಪಿಸಿದ್ದಾರೆ.
ದೇಶದ ಜನತೆ ಕೇಂದ್ರದಲ್ಲಿ ಬದಲಾವಣೆಯನ್ನು ಬಯಸಿದ್ದು, ಮೇ 23ರ ನಂತರ ದೇಶದಲ್ಲಿ ಮತ್ತೆ ಸ್ವಾಭಿಮಾನದ ಯುಗ ಪ್ರಾರಂಭವಾಗಲಿದೆ. ಆದರ್ಶ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫೋಟೋ :: ಮೈನಾ


No comments
Post a Comment