ಲೋಕಸಭಾ ಚುನಾವಣೆಗೆ ಅಗತ್ಯ ಸಿದ್ಧತೆ: ಅನೀಸ್ ಕಣ್ಮಣಿ ಜಾಯ್
ಮಡಿಕೇರಿ :-ಇದೇ ಏಪ್ರಿಲ್, 18 ರಂದು ನಡೆಯುವ ಲೋಕಸಭಾ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗಾರರ ಜತೆ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 4,41,041 ಮತದಾರರಿದ್ದು, ಇವರಲ್ಲಿ 2,18,994 ಪುರುಷರು ಮತ್ತು 2,22,025 ಮಹಿಳಾ ಮತದಾರರು ಹಾಗೂ 22 ಇತರೆ ಮತದಾರರು ಇದ್ದಾರೆ. ಹಾಗೆಯೇ 1,361 ಸೇವಾ ಮತದಾರರು ಇದ್ದು, ಇವರಲ್ಲಿ 1312 ಪುರುಷ ಸೇವಾ ಮತದಾರರು ಮತ್ತು 49 ಮಹಿಳಾ ಸೇವಾ ಮತದಾರರು ಇದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 543 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ 61 ನಗರ ಪ್ರದೇಶ ಹಾಗೂ 482 ಗ್ರಾಮಾಂತರ ಪ್ರದೇಶದ ಮತಗಟ್ಟೆಗಳನ್ನು ಒಳಗೊಂಡಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕೊಡಗು-ಮೈಸೂರು ಕ್ಷೇತ್ರದಲ್ಲಿ 22 ಮಂದಿ ಕಣದಲ್ಲಿದ್ದಾರೆ. ಆದ್ದರಿಂದ ಈ ಬಾರಿ ಪ್ರತಿ ಮತಗಟ್ಟೆಯಲ್ಲಿ 2 ಬ್ಯಾಲೆಟ್ ಯುನಿಟ್ ಬಳಸಲಾಗುತ್ತದೆ ಎಂದರು.
ಈಗಾಗಲೇ ವಿದ್ಯುನ್ಮಾನ ಮತಯಂತ್ರಗಳ ಮೊದಲ ಹಂತದ ಪರಿಶೀಲನಾ ಕಾರ್ಯ ನಡೆದಿದೆ. ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 1,251 ಬ್ಯಾಲೆಟ್ ಯುನಿಟ್, 721 ಕಂಟ್ರೋಲ್ ಯುನಿಟ್ ಮತ್ತು 667 ವಿವಿಪ್ಯಾಟ್ ಬಳಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದರು.
ಮತದಾರರ ಸಹಾಯಕ್ಕಾಗಿ ಚುನಾವಣಾ ಆಯೋಗವು ವೋಟರ್ ಹೆಲ್ಫ್ ಲೈನ್ ಆಪ್, ಚುನಾವಣಾ ಆಪ್ ಮತ್ತು ಸಿ-ವಿಜಿಲ್ ಆಫ್ ಗಳನ್ನು ಬಿಡುಗಡೆ ಮಾಡಿದ್ದು, ಇದನ್ನು ಬಳಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಹೊಸದಾಗಿ ಸೇರ್ಪಡೆಗೊಂಡ ಮತ್ತು ತಿದ್ದುಪಡಿ ಮಾಡಲಾದ ಒಟ್ಟು 11,261 ಮತದಾರರಿಗೆ ಭಾವಚಿತ್ರವಿರುವ ಮತದಾರರ ಗುರುತಿನ ಚೀಟಿಯನ್ನು ಬೂತ್‍ಮಟ್ಟದ ಅಧಿಕಾರಿಗಳ ಮೂಲಕ ವಿತರಿಸಲಾಗಿದೆ. ಹಾಗೆಯೇ ಜಿಲ್ಲೆಯ ಎಲ್ಲಾ ಒಟ್ಟು 4,41,041 ಮತದಾರರಿಗೆ ವೋಟರ್ ಸ್ಲಿಪ್‍ನ್ನು ಬೂತ್ ಮಟ್ಟದ ಅಧಿಕಾರಿಗಳ ಮೂಲಕ ವಿತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 1,42,716 ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಒಂದರಂತೆ ಮತದಾರರ ಗೈಡ್‍ನ್ನು ಬೂತ್ ಮಟ್ಟದ ಅಧಿಕಾರಿಗಳ ಮೂಲಕ ವಿತರಿಸಲು ಸಹ ಸಿದ್ಧ್ದತೆ ಮಾಡಿಕೊಳ್ಳಲಾಗಿದ್ದು, ಮತದಾರರ ಗೈಡ್‍ನಲ್ಲಿ ಮತದಾನ ಕೇಂದ್ರದಲ್ಲಿ ಇರುವ ಸೌಲಭ್ಯಗಳ ವಿವರ, ಮತದಾರರು ಯಾವ ಮತಗಟ್ಟೆಯಲ್ಲಿ ಮತದಾನ ಮಾಡಬೇಕು ಎಂಬ ಬಗ್ಗೆ ಕಂಡುಕೊಳ್ಳಲು ವಿವರಗಳು, ವಿವಿಪ್ಯಾಟ್ ಉಪಯೋಗಿಸುವ ರೀತಿ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಸಿ-ವಿಜಿಲ್ ಆಪ್ ಮೂಲಕ ದೂರು ಸಲ್ಲಿಕೆಯ ಬಗ್ಗೆ ವಿವರ, ಸಹಾಯವಾಣಿಯ ವಿವರ ಮತ್ತು ಎಪಿಕ್ ಸಂಖ್ಯೆಯನ್ನು ಉಪಯೋಗಿಸಿ ಮತದಾರರ ವಿಧಾನಸಭಾ ಕ್ಷೇತ್ರ, ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆಯನ್ನು ಅತೀ ಸುಲಭವಾಗಿ ಎಸ್‍ಎಂಎಸ್ ಮೂಲಕ ಕಂಡುಕೊಳ್ಳಲು ದೂರವಾಣಿ ವಿವರ ಮತ್ತು ಮತದಾರರ ಗುರುತಿನ ಚೀಟಿ ಹೊಂದಿಲ್ಲದೇ ಇದ್ದರೆ ಮತದಾನಕ್ಕೆ ಹಾಜರುಪಡಿಸಬೇಕಾದ ದಾಖಲೆಗಳ ವಿವರ ಹಾಗೂ ಚುನಾವಣೆ ಮತ್ತು ಚುನಾವಣಾ ಆಯೋಗದ ಮಹತ್ತರ ವಿಷಯಗಳ ಕೈಪಿಡಿಯನ್ನು ಮತದಾರರ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ ಎಂದು ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 543 ಮತಗಟ್ಟೆಗಳಿದ್ದು, ಇವುಗಳಲ್ಲಿ 123 ಸೂಕ್ಷ್ಮ(ಕ್ರಿಟಿಕಲ್) ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಅವರು ತಿಳಿಸಿದರು.
ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 91 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 53 ಮತಗಟ್ಟೆಗಳನ್ನು ಕಾಡಾನೆ ಸಂಘರ್ಷ ಇರುವ ಮತಗಟ್ಟೆಗಳಾಗಿ ಗುರುತಿಸಲಾಗಿದ್ದು, ಮತಗಟ್ಟೆ ಅಧಿಕಾರಿಗಳು ಸುರಕ್ಷಿತವಾಗಿ ಮತಗಟ್ಟೆ ತಲುಪಲು ಮತ್ತು ಮತದಾನ ಪೂರ್ಣಗೊಂಡ ನಂತರ ಸುರಕ್ಷಿತವಾಗಿ ಡಿ-ಮಸ್ಟರಿಂಗ್ ಕೇಂದ್ರಕ್ಕೆ ತಲುಪುವ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅರಣ್ಯ ಇಲಾಖೆ ಕಚೇರಿಯಲ್ಲಿ 24*7 ನಿಯಂತ್ರಣ ಕೊಠಡಿ ತೆರೆಯಲಾಗಿದೆ. (ದೂ.ಸಂ: 08272-298161).
ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಪ್ರತಿ ವಿಧಾನಸಭಾ ಕ್ಷೇತ್ರವಾರು ನೀತಿ ಸಂಹಿತೆ ಪಾಲನಾ ತಂಡ ಹಾಗೂ ಚುನಾವಣಾ ವೆಚ್ಚ ನಿರ್ವಹಣೆ ತಂಡ ರಚಿಸಲಾಗಿದ್ದು, 41 ಸೆಕ್ಟರ್ ಆಫಿಸರ್, 14 ಎಫ್‍ಎಸ್‍ಟಿ, 42 ಎಸ್‍ಎಸ್‍ಟಿ, 4 ವಿಎಸ್‍ಟಿ, 2 ವಿವಿಟಿ, 2 ಲೆಕ್ಕ ನಿರ್ವಹಣಾ ತಂಡ, 2 ಸಹಾಯಕ ವೆಚ್ಚ ವೀಕ್ಷಕರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

No comments
Post a Comment