ಎಸ್.ಎಸ್.ಎಲ್.ಸಿ. ಫಲಿತಾಂಶ ಕೊಡಗು ೨೨ ನೇ ಸ್ಥಾನಕ್ಕೆ ಕುಸಿತ

No comments

ಹತ್ತನೇ ತರಗತಿ ಫಲಿತಾಂಶ : ಕೊಡಗು 22 ನೇ ಸ್ಥಾನಕ್ಕೆ ಕುಸಿತ : ಜಾಗೃತಿ, ಶಾವಣಿ ಜಿಲ್ಲೆಗೆ ಪ್ರಥಮರು
ಮಡಿಕೇರಿ ಏ.೩೦ : ಹತ್ತನೇ ತರಗತಿ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ ವರ್ಷ ೧೮ ನೇ ಸ್ಥಾನದಲ್ಲಿದ್ದ ಕೊಡಗು ಜಿಲ್ಲೆ ಈ ಬಾರಿ ೨೨ ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಗೋಣಿಕೊಪ್ಪಲು ಕಳತ್ಮಾಡ್ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಜಾಗೃತಿ ಸುಬ್ಬಯ್ಯ ಹಾಗೂ ಸೋಮವಾರಪೇಟೆಯ ಸೇಂಟ್ ಜೋಸೆಫ್ ಶಾಲೆಯ ಶ್ರಾವಣಿ ೬೧೬ ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಈ ಬಾರಿ ಶೇ. ೭೮.೮೧ ಫಲಿತಾಂಶ ಗಳಿಸಿರುವ ಕೊಡಗು ಜಿಲ್ಲೆ ೨೦೧೮ರಲ್ಲಿ ಶೇ. ೮೦.೬೮ ರಷ್ಟು ಸಾಧನೆ ಮಾಡಿತ್ತು.

ಕಳೆದ ಆಗಸ್ಟ್ ತಿಂಗಳಿನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಸಂದರ್ಭ ನೀಡಿದ ರಜೆಗಳಿಂದಾಗಿ ಫಲಿತಾಂಶದಲ್ಲಿ ಹಿನ್ನಡೆಯಾಗಿರಬಹುದೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಮಚ್ಚಾಡೊ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ೨೦ ಶಾಲೆಗಳು ಶೇಕಡ ೧೦೦ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ಈ ಪೈಕಿ ೭ ಸರಕಾರಿ ಶಾಲೆಗಳು, ೩ ಅನುದಾನಿತ ಹಾಗೂ ೧೦ ಅನುದಾನ ರಹಿತ ಶಾಲೆಗಳು ಸೇರಿವೆ. ಕನ್ನಡ ಮಾದ್ಯಮದಲ್ಲಿ ಶೇಕಡ ೬೯.೨೬ ಹಾಗೂ ಆಂಗ್ಲ ಮಾದ್ಯಮದಲ್ಲಿ ಶೇ.೮೯.೦೫ ಫಲಿತಾಂಶ ದಾಖಲಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ ಶೇ. ೮೪.೬೪, ಮಡಿಕೇರಿ ೭೩.೫೮ ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ ೬೮.೧೨ರಷ್ಟು ಫಲಿತಾಂಶ ಕಂಡು ಬಂದಿದೆ.
::: ಶೇ.೧೦೦ರಷ್ಟು ಫಲಿತಾಂಶ ಪಡೆದ ಶಾಲೆಗಳು :::
ಸರ್ಕಾರಿ ಶಾಲೆಗಳಾದ ಕೊಂಡಗೇರಿ, ಚೆಂಬು, ಹಂಡ್ಲಿ, ನಿಡ್ತ, ಮಕ್ಕಂದೂರು, ಟಿ.ಶೆಟ್ಟಿಗೇರಿ, ಕಿರಗಂದೂರು ಒಟ್ಟು ೭ ಶಾಲೆಗಳು. ಅನುದಾನಿತ ಶಾಲೆಗಳಾದ ಬಿರುನಾಣಿ ಮರೆನಾಡು ಪ್ರೌಢ ಶಾಲೆ, ಬೆಕ್ಕೆ ಸೊಡ್ಲೂರು ಶಾರದ ಪ್ರೌಢ ಶಾಲೆ, ದೇವಣಗೆರೆ ಬಿ.ಸಿ.ಪ್ರೌಢ ಶಾಲೆ, ಅನುದಾನ ರಹಿತ ಶಾಲೆಗಳಾದ ಪೊನ್ನಂಪೇಟೆಯ ಸಂತ ಅಂತೋನಿ ಆಂಗ್ಲ ಮಾಧ್ಯಮ ಶಾಲೆ, ಕೊಡಗರಹಳ್ಳಿಯ ಶಾಂತಿ ನಿಕೇತನ ಪ್ರೌಢ ಶಾಲೆ, ಮೂರ್ನಾಡು ಮಾರುತಿ ಪ್ರೌಢ ಶಾಲೆ, ವಿರಾಜಪೇಟೆಯ ಕಾವೇರಿ ಪ್ರೌಢ ಶಾಲೆ, ಗೋಣಿಕೊಪ್ಪದ ಸಂತ ತೋಮಸ್ ಪ್ರೌಢ ಶಾಲೆ, ವಿರಾಜಪೇಟೆಯ ತ್ರಿವೇಣಿ ಪ್ರೌಢ ಶಾಲೆ, ಶ್ರೀಮಂಗಳದ ಜೆ.ಸಿ. ಆಂಗ್ಲ ಮಾಧ್ಯಮ ಶಾಲೆ, ಕೊಡಂಬೂರು ಜ್ಞಾನ ಜ್ಯೋತಿ ಪ್ರೌಢ ಶಾಲೆ, ಸಿದ್ದಾಪುರದ ಶ್ರೀಕೃಷ್ಣ ವಿದ್ಯಾಮಂದಿರ ಹಾಗೂ ವಿರಾಜಪೇಟೆಯ ಮೌಂಟೇನ್ ವ್ಯೂ ಪ್ರೌಢ ಶಾಲೆ ಒಟ್ಟು ೧೦ ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು ೨೦ ಶಾಲೆಗಳಿಗೆ ಶೇ.೧೦೦ ರಷ್ಟು ಫಲಿತಾಂಶ ಪಡೆದಿವೆ.
::: ಪ್ರಥಮ ನಾಲ್ಕು ಸ್ಥಾನ ಗಳಿಸಿದ ವಿದ್ಯಾರ್ಥಿಗಳು :::
ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಎಂ.ಜಾಗೃತಿ ಸುಬ್ಬಯ್ಯ ೬೧೬, ಸೋಮವಾರಪೇಟೆ ಸಂತ ಜೋಸೆಫರ ಪ್ರೌಢ ಶಾಲೆಯ ಎಂ.ಯು.ಶ್ರಾವಣಿ ೬೧೬, ಶನಿವಾರಸಂತೆಯ ಸೇಕ್ರೇಡ್ ಹಾರ್ಟ್ ಪ್ರೌಢ ಶಾಲೆಯ ಎ.ಎಚ್.ಕವನ ೬೧೫, ಬಿ.ಅಪೇಕ್ಷಾ ೬೧೨, ಚೌಡ್ಲು ಸಾಂಧೀಪನಿ ಪ್ರೌಢ ಶಾಲೆಯ ಎಚ್.ಕೆ.ಚಿನ್ಮಯಿ ೬೧೨, ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಕೆ.ಎ.ಅನನ್ಯ ೬೧೨, ಕುಶಾಲನಗರ ಫಾತಿಮಾ ಪ್ರೌಢ ಶಾಲೆಯ ಡಿ.ಆರ್.ಶಿವಾನಿ ಮತ್ತು ಎನ್.ಡಿ.ಹರ್ಷಿಣಿ ೬೧೨, ಮಡಿಕೇರಿಯ ಸಂತ ಜೋಸೆಫರ ಪ್ರೌಢ ಶಾಲೆಯ ಪಿ.ಎಲ್.ಮೌನ ಮತ್ತು ಗೋಣಿಕೊಪ್ಪ ಲಯನ್ಸ್ ಪ್ರೌಢ ಶಾಲೆಯ ಕೆ.ಪಿ.ಅನನ್ಯ ಅಕ್ಕಮ್ಮ ಅವರು ತಲಾ ೬೧೧ ಅಂಕ ಪಡೆದಿದ್ದಾರೆ.
ಒಟ್ಟಾರೆ ತಾಲ್ಲೂಕುವಾರು ಗಮನಿಸಿದಾಗ ವಿರಾಜಪೇಟೆ ತಾಲ್ಲೂಕು ಶೇ.೮೪.೬೪, ಮಡಿಕೇರಿ ತಾಲ್ಲೂಕು ಶೇ.೭೩.೮೫ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಶೇ.೬೮.೧೮ ಫಲಿತಾಂಶ ಬಂದಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಸರ್ಕಾರಿ ಶಾಲೆಗಳ ಫಲಿತಾಂಶ ಶೇ ೭೨.೫೪, ಅನುದಾನಿತ ಶಾಲೆಗಳ ಫಲಿತಾಂಶ ಶೇ ೭೪.೨೮, ಅನುದಾನ ರಹಿತ ಶಾಲೆಗಳ ಫಲಿತಾಂಶ ಶೇ ೮೭.೬೪ ಆಗಿದೆ. ಜಿಲ್ಲೆಯಲ್ಲಿ ೪೭ ಸರ್ಕಾರಿ ಪ್ರೌಢಶಾಲೆಗಳಿದ್ದು, ೪೮ ಅನುದಾನಿತ ಶಾಲೆಗಳಿದ್ದರೆ, ಅನುದಾನ ರಹಿತ ಶಾಲೆಗಳ ಸಂಖ್ಯೆ ೬೭ ಆಗಿದೆ. ೬,೪೪೪ ವಿದ್ಯಾರ್ಥಿಗಳು ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ತೆಗೆದುಕೊಂಡಿದ್ದರು. ಅದರಲ್ಲಿ ೫,೦೮೭ ಮಂದಿ ತೇರ್ಗಡೆ ಹೊಂದಿದ್ದಾರೆ.

No comments

Post a Comment