ಮತಗಟ್ಟೆ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿ;
ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿ: ಅನೀಸ್ ಕಣ್ಮಣಿ ಜಾಯ್
ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿ: ಅನೀಸ್ ಕಣ್ಮಣಿ ಜಾಯ್
ಮಡಿಕೇರಿ :ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತದಾನವು ಏಪ್ರಿಲ್, 18 ರಂದು ನಡೆಯಲಿದ್ದು, ಜಿಲ್ಲೆಯ 543 ಮತಗಟ್ಟೆಗಳಿಗೆ ನಿಯೋಜಿಸಿರುವ ಪಿಆರ್‍ಒ, ಎಪಿಆರ್‍ಒ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ನಗರದ ಸಂತ ಜೋಸೆಫರ ಶಾಲೆ ಹಾಗೂ ವಿರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ಎರಡನೇ ಹಂತದ ತರಬೇತಿ ಕಾರ್ಯಕ್ರಮವು ಭಾನುವಾರ ನಡೆಯಿತು.
ಮಸ್ಟರಿಂಗ್ ದಿನ ಮತ್ತು ಮತಗಟ್ಟೆ ಕೇಂದ್ರದಲ್ಲಿ ನಿರ್ವಹಿಸಬೇಕಾದ ಕಾರ್ಯ ಹಾಗೂ ಡಿಮಸ್ಟರಿಂಗ್ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಸಹಾಯಕ ಚುನಾವಣಾಧಿಕಾರಿಗಳಾದ ಟಿ.ಜವರೇಗೌಡ, ಶ್ರೀನಿವಾಸ್ ಮತ್ತು ಮಾಸ್ಟರ್ ತರಬೇತಿದಾರರು ಹಲವು ಮಾಹಿತಿ ನೀಡಿದರು.
ಅಣುಕು ಮತದಾನ, ಅಂಚೆ ಮತಪತ್ರ, ಮಸ್ಟರಿಂಗ್, ಡಿಮಸ್ಟರಿಂಗ್ ಕಾರ್ಯ ನಿರ್ವಹಣೆ ಹಾಗೂ ಕಂಟ್ರೊಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್ ಮತ್ತಿತರ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಲಾಯಿತು.
ಮತಗಟ್ಟೆ ಕೇಂದ್ರದಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ತರಬೇತಿ ಪಡೆದು ಮತದಾನದಂದು ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ನಿರ್ದೇಶನ ನೀಡಿದರು.
ಮತಗಟ್ಟೆ ಅಧಿಕಾರಿಗಳು ಮತಗಟ್ಟೆ ಕೇಂದ್ರದ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳಬೇಕಿದೆ, ಆ ದಿಸೆಯಲ್ಲಿ ಎಲ್ಲಾ ಹಂತದ ಮತಗಟ್ಟೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರು ಮಾತನಾಡಿ ಮಸ್ಟರಿಂಗ್ ದಿನದಂದು ಮತಗಟ್ಟೆಯ ಎಲ್ಲಾ ಸಿಬ್ಬಂದಿಗಳು ಕಡ್ಡಾಯವಾಗಿ ನಿಗಧಿತ ಸಮಯಕ್ಕೆ ಹಾಜರಾಗಬೇಕು. ತಮ್ಮ ತಮ್ಮ ಮತಗಟ್ಟೆಗೆ ಸಂಬಂಧಿಸಿದ ಸಿಬ್ಬಂದಿಗಳನ್ನು ಸೇರಿಸಿಕೊಂಡು ಪರಸ್ಪರ ಪರಿಚಯ ಮಾಡಿಕೊಳ್ಳಬೇಕು, ಹಾಜರಾತಿ ಪುಸ್ತಕದಲ್ಲಿ ಕಡ್ಡಾಯವಾಗಿ ಸಹಿ ಮಾಡುವುದು. ಯಾವುದೇ ಮತಗಟ್ಟೆ ಅಧಿಕಾರಿ ಇತರೆ ಸಿಬ್ಬಂದಿ ಗೈರು ಆದಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರರಿಗೆ ತಿಳಿಸುವುದು. ರಜೆ ಹೋದಲ್ಲಿ ಬದಲಿ ವ್ಯವಸ್ಥೆ ಮಾಡಿಕೊಳ್ಳುವುದು ಮಸ್ಟರಿಂಗ್ ಪಟ್ಟಿಯಿಂದ ದೃಢಪಡಿಸಿಕೊಳ್ಳಬೇಕು ಎಂದರು.
ಉಪ ವಿಭಾಗಾಧಿಕಾರಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಟಿ.ಜವರೇಗೌಡ ಅವರು ಮಾತನಾಡಿ ಮತಗಟ್ಟೆ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಅಧಿಕಾರಿಯಿಂದ ಮತದಾನಕ್ಕೆ ಸಂಬಂಧಿಸಿದ ಎಲ್ಲಾ ಸಾಮಾಗ್ರಿಗಳನ್ನು ಪಡೆದು ಚುನಾವಣೆ ಕರ್ತವ್ಯ ನಿರ್ವಹಿಸಬೇಕು. ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ದಿನ ಚುನಾವಣೆಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಬೇಕು ಎಂದರು.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಶ್ರೀನಿವಾಸ್ ಅವರು ತಮ್ಮ ಕಾರ್ಯ ತಂಡ ಸದಸ್ಯರ ಒಗ್ಗೂಡಿಸುವುದು, ಸಾಮಾಗ್ರಿ ವಿತರಿಸುವ ಮಸ್ಟರಿಂಗ್ ಕೌಂಟರ್‍ಗೆ ತೆರಳುವುದು ತಂಡದ ಸದಸ್ಯರೊಂದಿಗೆ ಮಸ್ಟರಿಂಗ್ ವಿಭಾಗದಿಂದ ವಿವಿಧ ಸಾಮಾಗ್ರಿ ಪಡೆಯುವುದು. ಸಾಮಾಗ್ರಿ ಪಡೆದ ನಂತರ ಮತ್ತೊಮ್ಮೆ ಸಾಮಾಗ್ರಿ ಪರಿಶೀಲಿಸಿಕೊಳ್ಳುವುದು ಮತ್ತಿತರ ಬಗ್ಗೆ ಗಮನ ವಹಿಸಬೇಕಿದೆ ಎಂದು ಅವರು ಸಲಹೆ ಮಾಡಿದರು.
ಮಾಸ್ಟರ್ ತರಬೇತಿದಾರರಾದ ವಾಲ್ಟರ್ ಡಿಮೆಲ್ಲೊ, ಷಂಶುದ್ದಿನ್ ಮತ್ತು ದಿವಾಕರ ಅವರು ವಿದ್ಯುನ್ಮಾನ ಮತಯಂತ್ರ, ಅಣಕು ಮತದಾನ, ಕಂಟ್ರೋಲ್ ಹಾಗೂ ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್ ಅಳವಡಿಸುವುದು. ಮತಗಟ್ಟೆ ಕೇಂದ್ರದಲ್ಲಿ ಮತದಾನದಂದು ಪೂರ್ವ ಸಿದ್ಧ್ದತೆ ಮಾಡಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು. ತಹಶೀಲ್ದಾರಾದ ನಟೇಶ್, ಗೋವಿಂದರಾಜು ಇತರರು ಇದ್ದರು.
ಇನ್ನಷ್ಟು ಮಾಹಿತಿ: ಮತಗಟ್ಟೆ ಅಧಿಕಾರಿಗಳು ಕಂಟ್ರೊಲ್ ಯೂನಿಟ್, ಬ್ಯಾಲೆಟ್ ಯೂನಿಟ್, ವಿವಿಪ್ಯಾಟ್, ವಿಎಸ್‍ಡಿಯು ಆಡ್ರಸ್ ಟ್ಯಾಗ್, ವಿಶೇಷ ಟ್ಯಾಗ್, ಗ್ರೀನ್ ಪೇಪರ್ ಸೀಲ್, ಸೀಲ್ ವಿಶೇಷ ಸ್ಟೀಪ್ ಸ್ಟೀಲ್ ಇದೆಯೇ ಎಂದು ಖಾತರಿ ಪಡಿಸಿಕೊಳ್ಳುವುದು.
ಗುರುತು ಮಾಡಿದ ಮತದಾರರ ಪಟ್ಟಿಗಳು, ಗುರುತು ಮಾಡಿದ ವರ್ಗೀಕೃತ ಸೇವಾ ಮತದಾರರಪಟ್ಟಿ, ರಬ್ಬರ್, ಮೊಹರು, ಪಿಆರ್‍ಒ ದಿನಚರಿ.
ಮತದಾರರ ರಿಜಿಸ್ಟ್ರಾರ್, ಮತದಾರರ ಚೀಟಿಗಳು ಟೆಂಡರ್ಡ್ ಮತದಾರರ ಪತ್ರಗಳು ಆಕ್ಷೇಪಿತ ಮತದಾರರ ಪಟ್ಟಿ, ಅಂಧ ಮತ್ತು ದುರ್ಬಲರ ಮತದಾರರ ಪಟ್ಟಿ, ಅಂಧ ಮತ್ತು ದುರ್ಬಲರ ಮತದಾರರ ಸಂಗಡಿಗರ ಘೋಷಣೆ, ಬಳಸಿದ ಸೀಲ್ ಪೇಪರ್ ಮತ್ತಿತರ ಬಗ್ಗೆ ಗಮನಹರಿಸಬೇಕಿದೆ ಎಂದರು.

No comments
Post a Comment