ಅಮೃತಸರ: ಬ್ರಿಟಿಷ್ ಇಂಡಿಯಾ ಆಡಳಿತದ ಘೋರ ಹತ್ಯಾಕಾಂಡ ಎನಿಸಿರುವ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನಕ್ಕೆ ಹೆಸರಾಗಿರುವ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡಕ್ಕೆ ಇಂದು ನೂರು ವರ್ಷಗಳಾಗಿವೆ. 1919ರ ಏಪ್ರಿಲ್ 13ರಂದು ಅಮೃತಸರದ ಜಲಿಯನ್ ವಾಲಾ ಬಾಗ್‌ನಲ್ಲಿ ನಡೆದ ಬ್ರಿಟಿಷರ ಅಟ್ಟಹಾಸದಲ್ಲಿ ಮಡಿದ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಭಾರತದಲ್ಲಿರುವ ಬ್ರಿಟನ್ ರಾಯಭಾರಿ ನಮನ ಸಲ್ಲಿಸಿದ್ದಾರೆ.
ಬೃಹತ್ ಗೋಡೆಗಳಿಂದ ಆವೃತವಾಗಿದ್ದ ಜಲಿಯನ್ ವಾಲಾ ಬಾಗ್‌ನಲ್ಲಿ ಅಂದು ಸಭೆ ಸೇರಿದ್ದ ನಿರಾಯುಧ ಭಾರತೀಯ ಸ್ವಾತಂತ್ರ್ಯಹೋರಾಟಗಾರರ ಮೇಲೆ 50 ಶಸ್ತ್ರ ಸಜ್ಜಿತ ಬ್ರಿಟಿಷ್ ಸೈನಿಕರು ಗುಂಡಿನ ಮಳೆಗರೆದಿದ್ದರು. ಈ ಘಟನೆಯಲ್ಲಿ ಕನಿಷ್ಟ 400 ಮಂದಿ ಹುತಾತ್ಮರಾಗಿದ್ದರು. ಘೋರ ಘಟನೆ ಬ್ರಿಟಿಷ್ ಆಡಳಿತಕ್ಕೆ ಕಪ್ಪುಚುಕ್ಕೆಯಾಗಿಯೇ ಈವರೆಗೆ ಉಳಿದುಕೊಂಡಿದೆ.
ಈ ನಡುವೆ ಭಾರತದಲ್ಲಿರುವ ಬ್ರಿಟಿಷ್ ಹೈಕಮಿಷನರ್ ಡೊಮಿನಿಕ್ ಅಸ್ಕ್ವಿತ್ ಶನಿವಾರ ಬೆಳಗ್ಗೆ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ಪುಷ್ಪಾಂಜಲಿ ಸಮರ್ಪಿಸಿದರು. ‘ನೂರು ವರ್ಷಗಳ ಹಿಂದೆ ನಡೆದ ಈ ಘಟನೆ ಬ್ರಿಟಿಷ್ ಇಂಡಿಯಾದ ನಾಚಿಕ್ಕೇಡಿನ ಕೃತ್ಯ. ಅಂದಿನ ಘಟನೆಯ ಸಾವು ನೋವುಗಳಿಗೆ ನಾವು ತೀವ್ರ ದುಃಖಿತರಾಗಿದ್ದೇವೆ. ಅಭಿವೃದ್ಧಿಯ ವಿಷಯದಲ್ಲಿ ಭಾರತ ಮತ್ತು ಬ್ರಿಟನ್ ಈ 21ನೇ ಶತಮಾನದಲ್ಲಿ ಒಟ್ಟಿಗೆ ಹೆಜ್ಜೆ ಹಾಕುತ್ತಿರುವುದಕ್ಕೆ ನಾನು ಸಂತಸ ವ್ಯಕ್ತಪಡಿಸುತ್ತೇನೆ,’ ಎಂದು ಹೇಳಿದ್ದಾರೆ.

No comments
Post a Comment