ಮಕ್ತಾಯಗೊಂಡ ಲೋಕಸಭಾ ಮತದಾನ : ಎಲೆಕ್ಷನ್ ವಿಶೇಷ ವರದಿ

No comments

ಲೋಕಸಭಾ ಚುನಾವಣೆಯ ದೇಶದ ಎರಡನೇ ಹಂತದ ಹಾಗೂ ರಾಜ್ಯದ ಮೊದಲ ಹಂತದ ಮತದಾನ ಇಂದು ಪೂರ್ಣಗೊಂಡಿದೆ. ಮೊದಲ ಹಂತದ ಮತದಾನದಲ್ಲಿ 69.43% ಮತದಾನ ದಾಖಲಾಗಿತ್ತು,ಈಗ 2ನೇ ಹಂತದ ಮತದಾನದ 61.12% ಮತದಾನದೊಂದಿಗೆ ಮುಕ್ತಾಯಗೊಂಡಿತು.
ಒಟ್ಟೂ 12 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ 95 ಕ್ಷೇತ್ರಗಳಲ್ಲಿ , ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಚುನಾವಣೆ ಬೆಳಿಗ್ಗೆ 7 ಗಂಟೆಗೆ ಆರಂಭವಾಯಿತಾದರೂ, ಉತ್ತರಪ್ರದೇಶ ಸೇರಿದಂತೆ ಹಲವೆಡೆ ಮತಯಂತ್ರ ಮತ್ತು ವಿವಿಪ್ಯಾಟ್ ನ ತಾಂತ್ರಿಕ ದೋಷದಿಂದ ಕೊಂಚ ತಡವಾಗಿ ಮತದಾನ ಆರಂಭವಾಯಿತು. ತಮಿಳುನಾಡಿನಲ್ಲಿ ಮತಯಂತ್ರ ಪರೀಕ್ಷೆ ವೇಳೆ ದೋಷ ಕಾಣಿಸಿಕೊಂಡ ಕಾರಣ ಸುಮಾರು 300 ಕ್ಕೂ ಹೆಚ್ಚು ಮತಯಂತ್ರ ಮತ್ತು ವಿವಿಪ್ಯಾಟ್ ನ್ನು ಬದಲಾಯಿಸಿ ನಂತರ ಮತದಾನಕ್ಕೆ ಅವಕಾಶ ಮಾಡಿಕೊಡಲಾಯಿತು. ಇನ್ನು ಕರ್ನಾಟಕದ ಚಿತ್ರದುರ್ಗ, ಹಾಸನ, ತುಮಕೂರು ಜಿಲ್ಲೆಗಳ ಮತಗಟ್ಟೆಗಳಲ್ಲೂ ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿದ್ದು ಮತದಾನ ವಿಳಂಬವಾಯಿತು. ಗ್ರಾಮಕ್ಕೆ ಸರಿಯಾದ ನೀರಿನ ಸೌಕರ್ಯ ನೀಡಿಲ್ಲವೆಂಬ ಕಾರಣಕ್ಕೆ ಕರ್ನಾಟಕದ ಚಾಮರಾಜನಗರ, ಬಾಗಕೋಟೆ ಭಾಗದ ಕೆಲವು ಮತಗಟ್ಟೆಗಳಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಬೆಂಗಳೂರಿನ ಕೆಲವು ಕಡೆ ಮತದಾರರ ಪಟ್ಟಿಯಿಂದ ಮತದಾರರ ಹೆಸರೇ ನಾಪತ್ತೆಯಾಗಿರುವ ಕಾರಣ ಜನರು ಚುನಾವಣೆ ಅಧಿಕಾರಿಗಳ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಮತದಾನ ವಂಚಿತರಾಗಿ ವಾಪಸ್ಸಾಗುವ ಸಂದರ್ಭ ಎದುರಾಯಿತು.
ಎಪ್ರೀಲ್ 11 ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಕಂಡು ಬಂದಷ್ಟು ಅಹಿತಕರ ಘಟನೆಗಳು ಈ ಬಾರಿ ಕಂಡು ಬರದಿದ್ದರೂ ಛತ್ತೀಸ್ಗಡದಲ್ಲಿ ನಕ್ಸಲರು ಮತದಾನದ ವೇಳೆ ಸುಧಾರಿತ ಬಾಂಬ್ ಸ್ಪೋಟಗೊಳಿಸಿರುವುದು ವರದಿಯಾಗಿದೆ. ಇದರ ಜೊತೆಗೆ ಬೆಂಗಳೂರಿನ ಕೆ.ಆರ್ಪುರಂ ವ್ಯಾಪ್ತಿಯ ಮತಗಟ್ಟೆ ಬಳಿ ಕಾಂಗ್ರೆಸ್ ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ ಉಂಟಾಗಿದ್ದು ಇಬ್ಬರು ಕಾರ್ಯಕರ್ತರು ಗಂಭೀರ ಗಾಯಗೊಂಡಿದ್ದಾರೆ. ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಹಾಗೂ ನಿಖಿಲ್ ಗೌಡ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದಲ್ಲಿ ಎಂಡೋಸಲ್ಫಾನ್ ಪೀಡಿತ ಮತದಾರರು ಕೂಡ ಇಂದು ಮತಚಲಾಯಿಸಿದ್ದು ಪ್ರಶಂಸನೀಯ.
ಬೆಳಗಿನಿಂದ ಸ್ವಲ್ಪ ನಿಧಾನ ಗತಿಯಲ್ಲೇ ಆರಂಭವಾದ ಮತದಾನನದ ಪ್ರಮಾಣ ರಾಜ್ಯದಲ್ಲಿ ಸಂಜೆಯಾಗುತ್ತಲೇ ಚುರುಕುಗೊಂಡಿತು. ಸಂಜೆ 6 ಗಂಟೆಗೆ ಅಸ್ಸಾಂ 73.41%, ಬಿಹಾರ 58.14 ಕರ್ನಾಟಕ 61.80%, ಜಮ್ಮು- ಕಾಶ್ಮೀರ 43.37 % ಮಹಾರಾಷ್ಟ್ರ 55.37 %, ಮಣಿಪುರ 74.69%, ಒಡಿಶಾ57.41%, ತಮಿಳುನಾಡು 61.52 ಛತ್ತೀಸ್​ಗಢ 68.70%, ಪುದುಚೇರಿ 72.40%, ಪಶ್ಚಿಮ ಬಂಗಾಳ 75.27%, ಉತ್ತರ ಪ್ರದೇಶ 58.12% ರಷ್ಟು ಮತದಾನ ದಾಖಲಾಯಿತು.

No comments

Post a Comment