ಮಸ್ಟರಿಂಗ್ ಕಾರ್ಯ ಪೂರ್ಣ:ಕೊಡಗಿನ ೫೪೩ ಮತಗಟ್ಟೆಗಳಿಗೆ ತಲುಪಿದ ಅಧಿಕಾರಿಗಳು

No comments

ಮಸ್ಟರಿಂಗ್ ಕಾರ್ಯ ಪೂರ್ಣ : ಕೊಡಗಿನ 543 ಮತಗಟ್ಟೆಗಳಿಗೆ ತಲುಪಿದ ಅಧಿಕಾರಿಗಳು
ಮಡಿಕೇರಿ ಏ.೧೭ : ಲೋಕಸಭಾ ಚುನಾವಣೆ ಸಂಬಂಧ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಮತದಾನಕ್ಕೆ ಮುನ್ನ ದಿನವಾದ ಬುಧವಾರ ನಗರದ ಸಂತ ಜೋಸೆಫರ ಶಾಲೆ ಮತ್ತು ವಿರಾಜಪೇಟೆ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪ್ರತ್ಯೇಕವಾಗಿ ಮಸ್ಟರಿಂಗ್ ಕಾರ್ಯ ನಡೆಯಿತು.
ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳ ಒಟ್ಟು ೫೪೩ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿಗಳು ತಲುಪಿದ್ದು, ಏ.೧೮ ರಂದು ನಡೆಯುವ ಮತದಾನಕ್ಕೆ ಸಿದ್ಧತೆ ಪೂರ್ಣಗೊಂಡಿದೆ.
ನಗರದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾದ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ ಅವರ ಮೇಲ್ವಿಚಾರಣೆಯಲ್ಲಿ ಹಾಗೂ ವಿರಾಜಪೇಟೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾದ ಶ್ರೀನಿವಾಸ್ ಅವರ ಮೇಲ್ವಿಚಾರಣೆಯಲ್ಲಿ ಹಾಗೂ ವಿರಾಜಪೇಟೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಮಡಿಕೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರ ಉಪಸ್ಥಿತಿಯಲ್ಲಿ ಮಸ್ಟರಿಂಗ್ ಕಾರ್ಯ ಸುಗಮವಾಗಿ ನಡೆಯಿತು.
ನಗರದ ಸಂತ ಜೋಸೆಫರ ಕಾಲೇಜು ಮತ್ತು ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಬುಧವಾರ ಬೆಳಗ್ಗೆಯಿಂದಲೇ ಚುನಾವಣಾ ಕಾರ್ಯದಲ್ಲಿ ನಿಯೋಜಿತರಾಗಿರುವ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು, ಪೋಲಿಂಗ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಜಮಾವಣೆಗೊಂಡು ಅತ್ಯಂತ ಅಚ್ಚುಕಟ್ಟಾಗಿ ತಮ್ಮ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಮಡಿಕೇರಿ ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸಂಬಂಧಿಸಿದಂತೆ ಸಮಾರೋಪಾದಿಯಲ್ಲಿ ಚುನಾವಣಾಧಿಕಾರಿಗಳು ಕಾರ್ಯ ನಿರ್ವಹಿಸಿದರು. ಮತಗಟ್ಟೆಗಳಿಗೆ ತೆರಳುವ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು, ಪೋಲಿಂಗ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಲು ಪ್ರತ್ಯೇಕವಾಗಿ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಚುನಾವಣೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸುಗಮವಾಗಿ ತಮ್ಮ ತಮ್ಮ ಮತಗಟ್ಟೆಗಳಿಗೆ ತಂಡಗಳೊಂದಿಗೆ ತೆರಳಲು ಅನುಕೂಲವಾಗುವಂತೆ ನಾಮಫಲಕಗಳಲ್ಲಿ ವಿವರಗಳನ್ನು ಪ್ರಕಟಿಸಲಾಗಿತ್ತು. ಅಲ್ಲದೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು ಪಿಆರ್‌ಒ, ಎಪಿಆರ್‌ಒ ಮತ್ತು ಪೋಲಿಂಗ್ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿತ್ತು.
ನಗರದ ಸಂತ ಜೋಸೆಫರ ಕಾಲೇಜು ಮತ್ತು ವಿರಾಜಪೇಟೆಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿಂದು ನಡೆದ ಮಸ್ಟರಿಂಗ್ ಕಾರ್ಯದಲ್ಲಿ ಎಲ್ಲಿ ನೋಡಿದರೂ ಅಧಿಕಾರಿ ಮತ್ತು ಸಿಬ್ಬಂದಿಗಳು ಮತಯಂತ್ರ ಹಾಗೂ ಚುನಾವಣಾ ಸಾಮಗ್ರಿಗಳನ್ನು ಹಿಡಿದು ವಾಹನಗಳತ್ತ ಸಾಗುವ ದೃಶ್ಯ ಕಂಡುಬಂದಿತು.
ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋ ವ್ಯೂವಿಂಗ್, ವಿಡಿಯೋ ಸರ್ವಿಲೆನ್ಸ್, ಚೆಕ್‌ಪೋಸ್ಟ್, ಸೆಕ್ಟರ್ ಅಧಿಕಾರಿಗಳು, ಮೈಕ್ರೋ ವೀಕ್ಷಕರು, ಸಂಚಾರಿ ಅಧಿಕಾರಿಗಳ ತಂಡಗಳನ್ನು ನಿಯೋಜಿಸಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲಾ ಮತಗಟ್ಟೆಗಳಿಗೆ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿಗಳನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಿ ಮತದಾರರು ನಿರ್ಭೀತಿಯಿಂದ ಮತ ಹಕ್ಕು ಚಲಾಯಿಸಲು ಕ್ರಮವಹಿಸಲಾಗಿದೆ. ಇದಲ್ಲದೆ ಜಿಲ್ಲಾ ಶಸಸ್ತ್ರ ಪಡೆ, ಪ್ರತಿ ಮತಗಟ್ಟೆಗಳಲ್ಲಿ ಪೊಲೀಸ್ ಅಥವಾ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲೆಯಲ್ಲಿ ಮೂವರು ಡಿವೈಎಸ್‌ಪಿ, ೩೬ ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ೧೨೦೦ ಪೊಲೀಸ್ ಸಿಬ್ಬಂದಿಗಳು, ೫೦೦ ಗೃಹರಕ್ಷಕ ದಳದ ಸಿಬ್ಬಂದಿ, ಸಶಸ್ತ್ರ ಪಡೆಗಳಾದ ಬಿಎಸ್‌ಎಫ್, ಡಿಎಆರ್, ಕೆಎಸ್‌ಆರ್‌ಪಿ ನಿಯೋಜಿಸಲಾಗಿದೆ. ಜೊತೆಗೆ ಚೀತಾ ಮೊಬೈಲ್ ತಂಡಗಳನ್ನು ನಿಯೋಜಿಸಲಾಗಿದೆ. ಎಸ್‌ಎಫ್‌ಟಿ, ಎಫ್‌ಎಸ್‌ಟಿ ಜೊತೆಗೆ ಕಾರ್ಯ ನಿರ್ವಹಿಸಲು ಪೊಲೀಸ್ ತಂಡ ನಿಯೋಜಿಸಲಾಗಿದೆ. ಹಾಗೆಯೇ ೪೯ ಸೆಕ್ಟರ್ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಂತರರಾಜ್ಯ ಗಡಿಪ್ರದೇಶ ಹಾಗೂ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ನಿಗಾವಹಿಸಲಾಗಿದೆ ಎಂದರು.
ಲೋಕಸಭಾ ಚುನಾವಣೆಯ ಮತದಾನವು ಏಪ್ರಿಲ್, ೧೮ ರಂದು ಬೆಳಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ನಡೆಯಲಿದೆ.

No comments

Post a Comment