ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಾರ್ಷಿಕೋತ್ಸವ

No comments


ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಾರ್ಷಿಕೋತ್ಸವ
ಮಡಿಕೇರಿ ಏ.೧೨ : ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ೨೦೧೮-೧೯ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭವು ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ನಡೆಯಿತು.
ವಿದ್ಯಾರ್ಥಿ ಜೀವನವು ಬಂಗಾರದ ಜೀವನವಾಗಿದ್ದು, ಅದನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದು ಮಡಿಕೇರಿ ಆಕಾಶವಾಣಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಕರೆ ನೀಡಿದರು.
ವಿದ್ಯಾರ್ಥಿಗಳು ವಿವಿಧ ಕಲೆ, ಶೈಕ್ಷಣಿಕ, ಕ್ರೀಡೆ ಇತರೆ ಎಲ್ಲಾ ಕ್ಷೇತ್ರಗಳಲ್ಲಿನ ಜ್ಞಾನವನ್ನು ಪಡೆದುಕೊಂಡು ಸಾಧಿಸಲು ಅವಕಾಶಗಳಿದ್ದು, ಅವುಗಳ ಉಪಯೋಗ ಪಡೆದುಕೊಳ್ಳುವುದರ ಮೂಲಕ ವಿದ್ಯಾರ್ಥಿಗಳು ಅಭಿವೃದ್ಧಿಯನ್ನು ಸಾಧಿಸುವ ಮೂಲಕ ಪ್ರಜ್ಞಾವಂತ ಪ್ರಜೆಗಳಾಗಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಹಲವಾರು ವಿಶೇಷವಾದ ಕಲೆಗಳನ್ನು ಅರಗಿಸಿಕೊಳ್ಳುವುದಕ್ಕೆ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಅವಕಾಶಗಳಿವೆ ಎಂದು ಅವರು ತಿಳಿಸಿದರು.
ವಿದ್ಯಾರ್ಥಿ ಜೀವನವನ್ನು ಉಲ್ಲಾಸದಿಂದ ಸ್ವೀಕರಿಸಿ ಹೊಸ ಅನ್ವೇಷಕರಾಗುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು, ಸಾಮಾಜಿಕ ಜಾಲತಾಣಗಳ ಅತೀ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಅದರಿಂದ ಉಂಟಾಗುವ ದುಷ್ಪರಿಣಾಮಗಳಿಂದ ದೂರವಿರಬೇಕು, ವಿದ್ಯಾರ್ಥಿಗಳು ಸದಾ ಮುಂದಾಲೋಚನೆಯಿಂದ ಸಂವೇದನಾಶೀಲತೆ ಬೆಳೆಸಿಕೊಳ್ಳಬೇಕು ಎಂದರು.
ಸ.ಪ್ರ.ದ.ಮ. ಕಾಲೇಜಿನ ಪ್ರಾಂಶುಪಾಲರಾದ ಡಾ.ಜೆನ್ನಿಫರ್ ಲೋಲಿಟ ಅವರು ಮಾತನಾಡಿ ವಿದ್ಯಾರ್ಥಿ ಜೀವನವು ವಿವಿಧ ಅವಕಾಶಗಳ ಆಗರವಾಗಿದೆ. ಭವಿಷ್ಯದ ಸಾಧನೆಯನ್ನು ಅನಾವರಣಗೊಳಿಸಲು ಉತ್ತಮ ಅವಕಾಶವಿದೆ. ಈ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಮುಂದಿನ ಪರೀಕ್ಷೆಗಳಲ್ಲಿ ಉನ್ನತ ಅಂಕಗಳೊಂದಿಗೆ ಉತ್ತೀರ್ಣರಾಗಬೇಕು ಎಂದು ಶುಭ ಹಾರೈಸಿದರು.
ಸ.ಪ್ರ.ದ.ಮ. ಕಾಲೇಜಿನ ಗೆಜೆಟೆಡ್ ಮ್ಯಾನೇಜರ್ ಕೆ.ಪಿ.ರವಿಕಿರಣ್ ಅವರು ಮಾತನಾಡಿದರು. ಸಮಾರಂಭದಲ್ಲಿ ಕಾಲೇಜಿನ ವಿವಿಧ ವಿಭಾಗದ ಪ್ರಾಧ್ಯಾಪಕರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ ಪದಾಧಿಕಾರಿಗಳು ಹಾಗೂ ಇತರರು ಹಾಜರಿದ್ದರು.
ಕಾಲೇಜಿನ ವಾರ್ಷಿಕ ಚಟುವಟಿಕೆ, ಸಾಧನೆಯ ಸಂಪೂರ್ಣ ವರದಿಯನ್ನು ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ನಿರ್ಮಲ ಎಚ್.ಪಿ. ಅವರು ವಾಚಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಸರಸ್ವತಿ ಅವರು ಸ್ವಾಗತಿಸಿದರು, ಕುಮಾರಿ ತಶ್ಮಿತ ಬಿ.ಆರ್ ವಂದಿಸಿದರು.

No comments

Post a Comment