ಮಡಿಕೇರಿಯಲ್ಲಿ ಮೈಕ್ರೋ ವೀಕ್ಷಕರಿಗೆ ತರಬೇತಿ...

No comments

ಮಡಿಕೇರಿಯಲ್ಲಿ ಮೈಕ್ರೋ ವೀಕ್ಷಕರಿಗೆ ತರಬೇತಿ
ಮಡಿಕೇರಿ ಏ.೧೧ : ಪ್ರಪಂಚದಲ್ಲಿ ಬೃಹತ್ ಪ್ರಜಾಪ್ರಭುತ್ವವನ್ನು ಹೊಂದಿರುವ ಭಾರತದಲ್ಲಿ ಮತದಾನವು ಶ್ರೇಷ್ಠವಾಗಿದೆ. ಆ ದಿಸೆಯಲ್ಲಿ ಮತದಾನದಂದು ಚುನಾವಣೆಯು ವ್ಯವಸ್ಥಿತವಾಗಿ ನಡೆಯುತ್ತಿದೆಯೇ ಎಂಬ ಬಗ್ಗೆ ಮೈಕ್ರೋ ವೀಕ್ಷಕರು ಮಾಹಿತಿ ಒದಗಿಸಬೇಕು ಎಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಾಮಾನ್ಯ ವೀಕ್ಷಕರಾದ ಕುಲದೀಪ್ ನಾರಾಯಣ ಅವರು ತಿಳಿಸಿದರು.

ನಗರದ ಸಂತ ಜೋಸೆಫರ ಶಾಲೆಯಲ್ಲಿ ಗುರುವಾರ ಮೈಕ್ರೋ ವೀಕ್ಷಕರಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗುತ್ತಿದ್ದು, ಈ ಮತಗಟ್ಟೆಗಳಲ್ಲಿ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸಲಾಗುತ್ತದೆಯೇ ಎಂಬ ಬಗ್ಗೆ ವರದಿ ನೀಡಬೇಕು ಎಂದು ಅವರು ತಿಳಿಸಿದರು.
ಪ್ರತಿ ಎರಡು ಗಂಟೆಗಳಿಗೊಮ್ಮೆ ಶೇಕಡಾವಾರು ಮತದಾನದ ಮಾಹಿತಿ ನೀಡುವುದು. ಯಾವುದೇ ರೀತಿಯ ಅಡಚಣೆ ಅಥವಾ ಗೊಂದಲ ಉಂಟಾದಲ್ಲಿ ತಕ್ಷಣವೇ ಮಾಹಿತಿ ನೀಡಬೇಕು. ಮತದಾನ ಮುಕ್ತಾಯ ಸಮಯದಲ್ಲಿ ಎಲ್ಲಾ ಚುನಾವಣಾ ಕಾರ್ಯಗಳು ಸುಗಮವಾಗಿ ನಡೆದಿವೆಯೇ ಎಂಬ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ಸುಗಮವಾಗಿ ನಡೆಯುತ್ತಿದೆಯೇ ಎಂಬುದನ್ನು ಗಮನಿಸಬೇಕು. ಮತಗಟ್ಟೆಯಲ್ಲಿ ನಿರ್ವಹಿಸಬೇಕಾದ ಕರ್ತವ್ಯ ಮತ್ತು ಕಾರ್ಯದ ಬಗ್ಗೆ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಮಾಸ್ಟರ್ ತರಬೇತಿದಾರರಾದ ವಾಲ್ಟರ್ ಡಿಮೆಲ್ಲೊ, ಷಂಶುದ್ದೀನ್, ಮಚ್ಚಾಡೋ, ವೀಕ್ಷಕರಾದ ನೋಡಲ್ ಅಧಿಕಾರಿಗಳಾದ ನಟರಾಜು, ಪ್ರಮೋದ್ ಇತರರು ಇದ್ದರು.

No comments

Post a Comment