ಮತದಾನದ ಮಹತ್ವ:ಬೀದಿ ನಾಟಕದ ಮೂಲಕ ಜಾಗೃತಿ ಅಭಿಯಾನ

No comments

ಮಡಿಕೇರಿ ಮಾ.೨೮ : ಭಾರತ ಚುನಾವಣಾ ಆಯೋಗ, ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ಇವರ ವತಿಯಿಂದ ಮತದಾನದ ಮಹತ್ವ ಕುರಿತು ಬೀದಿ ನಾಟಕ ಕಾರ್ಯಕ್ರಮಕ್ಕೆ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯಾ ಅವರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಗುರುವಾರ ಮತದಾನ ಮಹತ್ವದ ಜಾಗೃತಿ ಕುರಿತು ನಡೆದ ಬೀದಿನಾಟಕಕ್ಕೆ ಚಾಲನೆ ನೀಡಿ ಮಾತನಾಡಿದ ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿಪ್ರಿಯಾ ಅವರು ಮತದಾರರ ಗುರುತಿನ ಚೀಟಿ ಪಡೆದ ಪ್ರತಿಯೊಬ್ಬರೂ ತಪ್ಪದೇ ಮತ ಚಲಾಯಿಸಿ ಪ್ರಜಾಪ್ರಭುತ್ವ ಬಲಪಡಿಸಲು ಕೈಜೋಡಿಸುವಂತೆ ಅವರು ಕೋರಿದರು.
ಚುನಾವಣಾ ಆಯೋಗವು ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಶೇಕಡವಾರು ಮತದಾನ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಮತದಾರರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿದೆ ಎಂದು ಸ್ವೀಪ್ ಸಮಿತಿ ಅಧ್ಯಕ್ಷರು ತಿಳಿಸಿದರು.
ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ ಜಿಲ್ಲೆಯ ಮೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ೧೫ ದಿನಗಳ ಕಾಲ ಲೋಕಸಭಾ ಚುನಾವಣೆ ಸಂಬಂಧ ಮತದಾರರಲ್ಲಿ ಮತದಾನದ ಮಹತ್ವ ಕುರಿತು ಬೀದಿನಾಟಕ ಕಾರ್ಯಕ್ರಮ ನಡೆಯಲಿದೆ ಎಂದರು.
ಕೊಡಗು ಜಿಲ್ಲಾ ವಿದ್ಯಾಸಾಗರ ಕಲಾವೇದಿಕೆಯ ರಾಜು ಮತ್ತು ತಂಡದವರು ’ಯಾವುದೇ ರೀತಿಯ ಆಮೀಷಕ್ಕೆ ಮರುಳಾಗದಿರಿ-ವಿವೇಚನೆಯಿಂದ ಮತ ಚಲಾಯಿಸಿ, ಮತದಾನ ಮಾಡಿದವರೇ ಮಹಾಶೂರರು’ ಎಂಬ ಸಂದೇಶಗಳ ಮೂಲಕ ಬೀದಿನಾಟಕ ಪ್ರದರ್ಶನ ಮಾಡಿ ಗಮನ ಸೆಳೆದರು.
ಮತಗಟ್ಟೆಗೆ ತೆರಳಿ ತಪ್ಪದೆ ಮತ ಚಲಾಯಿಸಿ, ರಜೆ ಇದೆ ಎಂದು ಪ್ರವಾಸಕ್ಕೆ ತೆರಳಬೇಡಿ, ಶೇಕಡವಾರು ಮತದಾನವಾಗಲು ಅರ್ಹರೆಲ್ಲರೂ ಮತ ಚಲಾಯಿಸುವಂತಾಗಬೇಕು. ಮತದಾನ ನಮ್ಮ ಹಕ್ಕು, ಪ್ರಜಾಪ್ರಭುತ್ವ ಬಲಪಡಿಸಲು ತಪ್ಪದೆ ಮತ ಚಲಾಯಿಸಿ ಎಂಬ ಸಂದೇಶವನ್ನು ಬೀದಿ ನಾಟಕದಲ್ಲಿ ಸಾರಲಾಯಿತು.
ಏಲ್ಲೆಲ್ಲಿ ಬೀದಿ ನಾಟಕ: ಮಡಿಕೇರಿ ಬಸ್ ನಿಲ್ದಾಣ, ಮೇಕೇರಿ, ಹಾಕತ್ತೂರು, ಬೆಟ್ಟಗೇರಿ, ಚೇರಂಬಾಣೆ, ಭಾಗಮಂಡಲ, ಅಯ್ಯಂಗೇರಿ, ಎಮ್ಮೆಮಾಡು, ನಾಪೋಕ್ಲು, ಹೊದ್ದೂರು, ಮೂರ್ನಾಡು. ವಿರಾಜಪೇಟೆ ತಾಲ್ಲೂಕಿನ ಕಾಕೋಟುಪರಂಬು, ಕದನೂರು, ಅರಮೇರಿ, ವಿರಾಜಪೇಟೆ, ಆರ್ಜಿ, ಬಿಟ್ಟಂಗಾಲ, ಹಾತೂರು, ಗೋಣಿಕೊಪ್ಪ, ಪೊನ್ನಂಪೇಟೆ, ಅರುವತೋಕ್ಲು, ದೇವರಪುರ, ತಿತಿಮತಿ, ಪಾಲಿಬೆಟ್ಟ, ಚೆನ್ನಯ್ಯನಕೋಟೆ, ಮಾಲ್ದಾರೆ, ಸಿದ್ದಾಪುರ, ಅಮ್ಮತ್ತಿ ಕಾರ್ಮಾಡು, ಬಿಳುಗುಂದ, ಬೆಟೋಳಿ, ಕದನೂರು.
ಸೋಮವಾರಪೇಟೆ ತಾಲ್ಲೂಕಿನ ನೆಲ್ಯಹುದಿಕೇರಿ, ಚೆಟ್ಟಳ್ಳಿ, ಸುಂಟಿಕೊಪ್ಪ, ಗುಡ್ಡೆ ಹೊಸೂರು, ಬಸವನಹಳ್ಳಿ, ಮಾದಪಟ್ಟಣ, ಕೂಡುಮಂಗಳೂರು, ಹೆಬ್ಬಾಲೆ, ತೊರೆನೂರು, ಅಳುವಾರ, ಶಿರಂಗಾಲ, ಆಲೂರು ಸಿದ್ದಾಪುರ, ಶನಿವಾರಸಂತೆ, ಕೊಡ್ಲಿಪೇಟೆ, ಗೌಡಳ್ಳಿ, ಸೋಮವಾರಪೇಟೆ, ಕೂಡಿಗೆ, ಬ್ಯಾಡಗೊಟ್ಟ ಇಲ್ಲಿ ಬೀದಿ ನಾಟಕ ಕಾರ್ಯಕ್ರಮ ನಡೆಯಲಿದೆ.

No comments

Post a Comment