ಮಡಿಕೇರಿ ಮಾ.೨೭ :
ಲೋಕಸಭಾ ಚುನಾವಣೆ ಹಿನ್ನೆಲೆ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಸೋಮವಾರಪೇಟೆ ಮತ್ತು ವಿರಾಜಪೇಟೆಯಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಎಎನ್‌ಎಂಗಳಿಗೆ ಇವಿಎಂ ಮತ್ತು ವಿವಿಪ್ಯಾಟ್ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವು ಬುಧವಾರ ನಡೆಯಿತು.
ಮತದಾರರು ತಾವು ಮತವನ್ನು ಯಾರಿಗೆ ಚಲಾಯಿಸಿದ್ದೇವೆ ಎಂಬುದನ್ನು ಖಾತರಿ ಪಡಿಸಿಕೊಳ್ಳಲು ವಿವಿಪ್ಯಾಟ್ ಸಹಕಾರಿಯಾಗಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಯ ನಾನಾ ಮತಗಟ್ಟೆಗಳ ವ್ಯಾಪ್ತಿಗೆ ನಿಯೋಜಿಸಿರುವ ಸೆಕ್ಟರ್ ಅಧಿಕಾರಿಗಳು ವಿವಿಪ್ಯಾಟ್ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಗ್ರಾಮೀಣ, ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ವಿವಿಪ್ಯಾಟ್ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಅರಿವು ಮೂಡಿಸುತ್ತಿರುವುದು ವಿಶೇಷವಾಗಿದೆ.
ಮತ ಖಾತ್ರಿಗೆ ವಿವಿಪ್ಯಾಟ್: ಚುನಾವಣಾ ಪ್ರಕ್ರಿಯೆ ಕುರಿತಂತೆ ಮತದಾರರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಜಾಗೃತಿ ಸಮಿತಿ(ಸ್ವೀಪ್) ವತಿಯಿಂದ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇವಿಎಂ, ವಿವಿಪ್ಯಾಟ್ ಬಳಕೆ ಕುರಿತು ಪ್ರಾತ್ಯಕ್ಷಿಕೆಗಳು ನಡೆಯುತ್ತಿವೆ.
ಮತದಾರ ಮತದಾನ ಮಾಡುವ ಸಂದರ್ಭದಲ್ಲಿ ತಾನು ಮತ ಚಲಾಯಿಸಬೇಕೆಂದಿರುವ ಚಿಹ್ನೆ ಮತ್ತು ಹೆಸರಿನ ಪಕ್ಕದಲ್ಲಿರುವ ನೀಲಿ ಬಣ್ಣ ಬಟನ್ ಒತ್ತಿದ ಕೂಡಲೇ ಕೆಂಪು ದೀಪ ಬೆಳಗುತ್ತದೆ. ಇವಿಎಂಗೆ ಅಳವಡಿಸಿರುವ ವಿವಿಪ್ಯಾಟ್ ಯಂತ್ರದ ಪರದೆಯಲ್ಲಿ ಮತದಾರರು ತಾವು ಮತ ಚಲಾಯಿಸಿರುವ ಚಿಹ್ನೆ ಮತ್ತು ಹೆಸರಿನ ವಿವರವುಳ್ಳ ಚೀಟಿಯನ್ನು ೭ ಕ್ಷಣಗಳ ಕಾಲ ಡಿಸ್‌ಪ್ಲೇ ಸೆಕ್ಷನ್‌ನಲ್ಲಿ ವೀಕ್ಷಿಸಬಹುದು. ತದನಂತರ ಆ ಚೀಟಿಯು ಡ್ರಾಪ್ ಬಾಕ್ಸ್ ಒಳಗೆ ತುಂಡಾಗಿ ಬೀಳುತ್ತದೆ. (ಈ ಚೀಟಿಯನ್ನು ಮತದಾರ ಪಡೆಯುವಂತಿಲ್ಲ).
ಮತದಾರು ತಾವು ಆರಿಸಬೇಕೆಂದಿರುವ ವ್ಯಕ್ತಿ/ ಪಕ್ಷಕ್ಕೆ ಮತ ಚಲಾವಣೆಯಾಗಿರುವುದನ್ನು ಖಾತರಿ ಪಡಿಸಿಕೊಳ್ಳಬಹುದಾಗಿದೆ. ಬ್ಯಾಲೆಟ್ ಚೀಟಿ ಕಾಣಿಸದಿದ್ದರೆ ಹಾಗೂ ಬೀಪ್ ಶಬ್ದ ಕೇಳಿಸದಿದ್ದರೆ ಮತದಾರನು ಮತಗಟ್ಟೆಯ ಅಧ್ಯಕ್ಷಾಧಿಕಾರಿಯನ್ನು ಸಂಪರ್ಕಿಸಬಹುದು.
ಇವಿಎಂ ಯಂತ್ರಗಳು ಅತ್ಯಂತ ಸುರಕ್ಷಿತವಾಗಿವೆ. ಈ ಯಂತ್ರದಲ್ಲಿ ಮೈಕ್ರೋ ಕಂಟ್ರೋಲರ್ ಚಿಪ್ ಅಳವಡಿಸಲಾಗಿದ್ದು, ವಿದ್ಯುನ್ಮಾನ ಮತಯಂತ್ರವನ್ನು ಒಮ್ಮೆ ಮಾತ್ರ ಪ್ರೊಗ್ರಾಂ ಮಾಡಲು ಸಾಧ್ಯ. ಚಿಪ್‌ನಲ್ಲಿರುವ ಸಾಫ್ಟ್‌ವೇರ್ ಕೋಡ್ ರೀಡ್ ಅಥವಾ ರೀರೈಟ್ ಮಾಡಲು ಸಾಧ್ಯವಿಲ್ಲ. ಈ ತಂತ್ರಾಂಶವನ್ನು ಬಿಇಎಲ್ ಮತ್ತು ಇಸಿಐಇಲ್ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ. ಇವಿಎಂ ಯಂತ್ರಗಳನ್ನು ಅಂತರ್ಜಾಲ ಅಥವಾ ಇನ್ಯಾವುದೇ ನೆಟ್‌ವರ್ಕ್ ಸಂಪರ್ಕದಿಂದ ನಿಯಂತ್ರಿಸಲು ಸಾಧ್ಯವಿಲ್ಲ. ಯಂತ್ರದಲ್ಲಿ ಯಾವುದೇ ಆಪರೇಟಿಂಗ್ ಸಿಸ್ಟಮ್ ಬಳಕೆ ಮಾಡದಿರುವುದರಿಂದ ವೈರಸ್ ದಾಳಿ ಉಂಟಾಗುವ ಭಯವೂ ಇಲ್ಲ.
ಇವಿಎಂ, ವಿವಿಪ್ಯಾಟ್ ಬಳಕೆ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ. ತಂಡಗಳಿಗೆ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಪ್ರಾತ್ಯಕ್ಷಿಕೆಗಾಗಿ ಒದಗಿಸಲಾಗಿದೆ. ಈ ತಂಡಗಳು ವಿವಿಧ ಭಾಗಗಳಲ್ಲಿ ಸಂಚರಿಸಿ ಈ ವಿದ್ಯುನ್ಮಾನ ಮತಯಂತ್ರದ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.
ಹಿರಿಯ ನಾಗರಿಕರನ್ನೊಳಗೊಂಡಂತೆ ಪ್ರತಿಯೊಬ್ಬರಿಗೂ ಮಾಹಿತಿ ನೀಡಲಾಗುತ್ತಿದೆ. ಸಂತೆ, ಜಾತ್ರೆ ಹಾಗೂ ಜನನಿಬಿಡ ಸ್ಥಳಗಳಲ್ಲಿ ಬೀದಿ ನಾಟಕಗಳು ಹಾಗೂ ಜಾಥಾಗಳನ್ನು ಕೈಗೊಳ್ಳಲಾಗುತ್ತಿದೆ. ಮೊಬೈಲ್ ಬಳಕೆದಾರರು ಹಾಗೂ ಯುವಜನತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಹಾಗೂ ಕರಪತ್ರ ಬ್ಯಾನರ್, ಕೈಪಿಡಿ, ಜಾಹೀರಾತು ಹೀಗೆ ವಿವಿಧ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸುವುದರ ಜೊತೆಗೆ ಇವಿಎಂ ಹಾಗೂ ವಿವಿಪ್ಯಾಟ್ ಕುರಿತ ಕಿರುಚಿತ್ರ ಹಾಗೂ ಸ್ಲೈಡ್‌ಗಳನ್ನು ಥಿಯೇಟರ‍್ಸ್ ಹಾಗೂ ಸಿನಿಮಾ ಮಂದಿರದಲ್ಲಿ ಪ್ರದರ್ಶಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಆ ನಿಟ್ಟಿನಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿ ಹಾಗೂ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ಜೊತೆಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕೈಜೋಡಿಸಿದ್ದು, ವಿವಿಧ ಮಾಧ್ಯಮಗಳ ಮೂಲಕ ಚುನಾವಣಾ ಸಂದೇಶಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಸಭೆ ಮತ್ತು ನಗರ ಸ್ಥಳೀಯ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ಸಾರ್ವಜನಿಕ ಶಿಕ್ಷಣ, ಕೃಷಿ, ತೋಟಗಾರಿಕೆ ಹಾಗೂ ಇನ್ನಿತರ ಪ್ರಮುಖ ಇಲಾಖೆಗಳು ಒಗ್ಗೂಡಿ ನಗರ, ಜಿಲ್ಲೆ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿವೆ. ಇವಿಎಂ-ವಿವಿಪ್ಯಾಟ್ ಬಗ್ಗೆ ಸ್ಪಷ್ಠತೆಯೊಂದಿಗೆ ಕಡೇ ಕ್ಷಣದವರೆಗೂ ಮತದಾನಕ್ಕೆ ಉತ್ತೇಜನ ನೀಡಲು ಚುನಾವಣಾ ಆಯೋಗ ಪ್ರಯತ್ನಿಸುತ್ತಿದೆ.
ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮತದಾರರ ಜಾಗೃತಿಗೆ ಎಲ್ಲ ಕ್ರಮಗಳನ್ನು ಸ್ವೀಪ್ ಮೂಲಕ ಕೈಗೊಂಡಿದೆ. ಚುನಾವಣಾ ಆಯೋಗವು ಸ್ವೀಪ್ ಸಮಿತಿ ಮುಖಾಂತರ ಮತದಾರರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು, ಔಚಿತ್ಯಪೂರ್ಣ ಮತ್ತು ನ್ಯಾಯೋಚಿತ ಮತದಾನವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ ಎಂದು ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ(ಸ್ವೀಪ್) ಅಧ್ಯಕ್ಷರಾದ ಕೆ.ಲಕ್ಷ್ಮಿಪ್ರಿಯಾ ಅವರು ತಿಳಿಸಿದ್ದಾರೆ.


No comments
Post a Comment