ಮಡಿಕೇರಿ ಮಾ.೨೮ : ಕೊಡಗಿನ ರೈತರು ಹಾಗೂ ಬೆಳೆಗಾರರು ಸಂಕಷ್ಟದಲ್ಲಿದ್ದರೂ ಕಳೆದ ಐದು ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸಿದ ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಸರಕಾರ ಯಾವುದೇ ಸ್ಪಂದನೆಯನ್ನು ನೀಡಿಲ್ಲವೆಂದು ಮಾಜಿ ಸಂಸದ ಹಾಗೂ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಹಿಂದೆಂದೂ ಕಂಡು ಕೇಳರಿಯದ ಸಂಕಷ್ಟಕ್ಕೆ ಸಿಲುಕಿದ್ದು, ಅದರಿಂದ ಮುಕ್ತವಾಗುವುದು ಹೇಗೆ ಎಂಬ ಜಿಜ್ಞಾಸೆಯಲ್ಲಿ ಇಲ್ಲಿನ ಬೆಳೆಗಾರರು, ರೈತರಿದ್ದಾರೆ.
ಕೊಡಗಿನ ಕಾಫಿ, ಕರಿಮೆಣಸು, ಏಲಕ್ಕಿ ಸೇರಿದಂತೆ ಸಂಬಾರ ಪದಾರ್ಥಗಳ ಬೆಲೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಾಗ ಇದ್ದ ಬೆಲೆಗೂ ಇಂದಿನ ಬೆಲೆಗೂ ಅಜಗಜಾಂತರ ವ್ಯತ್ಯಾಸವಾಗಿದ್ದು, ಇದಕ್ಕೆ ಕೇಂದ್ರ ಸರಕಾರದ ರಫ್ತು ಮತ್ತು ಆಮದು ನೀತಿಯೇ ಕಾರಣ ಎಂದು ದೂರಿದ ವಿಜಯಶಂಕರ್, ಕೊಡಗಿನ ಕರಿಮೆಣಸು ವಿಶ್ವದಲ್ಲೇ ಉತ್ಕೃಷ್ಟ ದರ್ಜೆಯದ್ದಾಗಿದ್ದರೂ, ಇದೀಗ ಅದರ ಬೆಲೆ ಶೇ.೫೦ರಷ್ಟು ಕುಸಿತ ಕಂಡು ಬೆಳೆಗಾರರು ಆತ್ಮಹತ್ಯೆಗೆ ಶರಣಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರೈತರ ಹಾಗೂ ಬೆಳೆಗಾರರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸಬೇಕಾದ ಸಂಸದರು ಕೂಡ ಈ ನಿಟ್ಟಿನಲ್ಲಿ ಗಮನಹರಿಸದಿರುವುದು ದುರಂತ ಎಂದು ಹೇಳಿದ ಅವರು,ಕಳೆದ ಮೂರು ವರ್ಷಗಳಿಂದ ಕಾಫಿ ಕೃಷಿಗೆ ದೊರಕಬೇಕಾದ ಸಬ್ಸಿಡಿ ಸ್ಥಗಿತವಾಗಿದ್ದರೂ, ಅದನ್ನು ದೊರಕಿಸಿಕೊಡುವಲ್ಲಿ ಸಂಸದರು ವಿಫಲರಾಗಿದ್ದಾರೆ. ಒಟ್ಟಾರೆಯಾಗಿ ಕೇಂದ್ರ ಸರಕಾರ ಹಾಗೂ ಸಂಸದರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲರಾಗಿ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದೇ ರೈತರ ಸಮಸ್ಯೆಗಳಿಗೆ ಕಾರಣ ಎಂದು ವಿಶ್ಲೇಷಿಸಿದರು.
ಕೊಡಗು ಜಿಲ್ಲೆ ಕಳೆದ ವರ್ಷ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದು, ಜೀವ ಹಾಗೂ ಬೆಳೆ ಹಾನಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವಲ್ಲೂ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸಂಸದರು ವಿಫಲರಾಗಿದ್ದಾರೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಸುಮಾರು ೭೫ ವರ್ಷಗಳಷ್ಟು ಹಳೆಯದಾಗಿದ್ದು, ಅದರ ಅಡಿಯಲ್ಲಿ ನೀಡುವ ಪರಿಹಾರಗಳು ಇಂದು ಎಲ್ಲಿಗೂ ಸಾಲದು ಎಂದು ನುಡಿದ ವಿಜಯಶಂಕರ್, ಈ ನಿಟ್ಟಿನಲ್ಲಿ ಕೊಡಗಿನ ಪ್ರಕೃತಿ ವಿಕೋಪವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸುವಂತೆ ಕೇಂದ್ರ ಸರಕಾರದ ಗಮನಸೆಳೆಯಬೇಕಾಗಿದ್ದು, ವಾಣಿಜ್ಯ ಹಾಗೂ ಕೃಷಿ ಸಚಿವರನ್ನು ಕೊಡಗಿಗೆ ಕರೆಸಿ ಇಲ್ಲಿನ ಬೆಳೆಗಾರರ ಸಭೆ ನಡೆಸಿ ಸಂಕಷ್ಟಗಳನ್ನು ಮನವರಿಕೆ ಮಾಡಿಸಬೇಕಾಗಿತ್ತು ಎಂದು ದೂರಿದರು.
::: ರೈಲು ಬರಲ್ಲ :::
ಪ್ರಸಕ್ತ ಕೊಡಗಿಗೆ ಕುಶಾಲನಗರದವರೆಗೆ ರೈಲು ಸಂಪರ್ಕ, ಕಸ್ತೂರಿರಂಗನ್ ವರದಿ ಜಾರಿ ಹಾಗೂ ಬೆಳೆಹಾನಿ ಪರಿಹಾರ ಸೇರಿದಂತೆ ಪ್ರಮುಖವಾಗಿ ಮೂರು ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಅಧಿಕೃತವಾದ ಮಾಹಿತಿ ಪ್ರಕಾರ ಕೊಡಗಿನ ಕುಶಾಲನಗರದವರೆಗೂ ರೈಲ್ವೆ ಸಂಪರ್ಕ ಬರುವುದಿಲ್ಲ. ಪರಿಸರಕ್ಕೆ ಹಾನಿ ಹಾಗೂ ಈ ಮಾರ್ಗದಿಂದ ಆರ್ಥಿಕ ಲಾಭ ಇಲ್ಲ ಎಂಬ ಕಾರಣಕ್ಕಾಗಿ ಕೇಂದ್ರ ರೈಲ್ವೆ ಸಚಿವಾಲಯ ಈ ಯೋಜನೆಯನ್ನು ಕೈಬಿಟ್ಟಿದೆ. ಆದರೆ ಈ ಕ್ಷೇತ್ರದ ಪ್ರತಿನಿಧಿಯಾಗಿ ಸಂಸದರು ಕೊಡಗಿಗೆ ರೈಲು ತರುವ ಬಗ್ಗೆ ತಮ್ಮ ಬದ್ಧತೆಯನ್ನು ಪ್ರದರ್ಶಿಸಿಲ್ಲ ಎಂದು ವಿಜಯಶಂಕರ್ ಆರೋಪಿಸಿದರು.
ಕಸ್ತೂರಿರಂಗನ್ ವರದಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರಗಳು ಸಲ್ಲಿಸುವ ಆಕ್ಷೇಪಣೆಗಳನ್ನು ಸ್ವೀಕರಿಸುವ ಹಾಗೂ ತಿರಸ್ಕರಿಸುವ ಅಧಿಕಾರ ಕೇಂದ್ರ ಸರಕಾರಕ್ಕಿದೆ. ರಾಜ್ಯ ಸರಕಾರ ಈ ಹಿಂದಿನಿಂದಲೂ ತನ್ನ ಆಕ್ಷೇಪಣೆಯನ್ನು ಸಲ್ಲಿಸುತ್ತಾ ಬಂದಿದ್ದರೂ, ಯಾವುದೇ ಮಾರ್ಪಾಡುಗಳನ್ನು ಮಾಡದೆ ವರದಿಯನ್ನು ಜಾರಿಗೊಳಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಈ ಕುರಿತಾದ ಅಧಿಕೃತ ಅಧಿಸೂಚನೆ ಹೊರಬೀಳುವುದಷ್ಟೇ ಬಾಕಿ ಇದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಬಿಜೆಪಿ ಸಂಸದರೇ ಇದ್ದರೂ, ಕಸ್ತೂರಿರಗನ್ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವುದರಿಂದ ಈ ಭಾಗದ ಜನರಿಗೆ ಆಗುವ ತೊಂದರೆಯ ಬಗ್ಗೆ ಕೇಂದ್ರ ಸರಕಾರದ ಗಮನಸೆಳೆಯುವ ಪ್ರಯತ್ನ ಮಾಡಿಲ್ಲ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ವಿಧಾನ ಪರಿಷತ್ ಸದಸ್ಯೆ ವೀಣಾಅಚ್ಚಯ್ಯ, ಪಕ್ಷದ ಪ್ರಮುಖರಾದ ಟಿ.ಪಿ.ರಮೇಶ್, ಕೆ.ಪಿ.ಚಂದ್ರಕಲಾ, ಸುರಯ್ಯ ಅಬ್ರಾರ್, ಕೆ.ಯು.ಅಬ್ದುಲ್ ರಜಾಕ್, ಬಿ.ಎಸ್.ರಮಾನಾಥ್, ಅಬ್ದುಲ್ ರೆಹಮಾನ್, ಎಂ.ಎ.ಉಸ್ಮಾನ್, ವಿ.ಪಿ.ಸುರೇಶ್ ಮತ್ತಿತರರು ಹಾಜರಿದ್ದರು.

No comments
Post a Comment