ತಲಕಾವೇರಿಯಲ್ಲಿ ಬ್ರಹ್ಮಕಲಶೋತ್ವಕ್ಕೆ ಏ.೫ ರಂದು ಚಾಲನೆ:ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ

No comments

ಮಡಿಕೇರಿ ಮಾ.28 :
ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಏ.5 ರಿಂದ 11ರ ವರೆಗೆ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಭಾಗಮಂಡಲ, ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಇಂದು ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಭಾಗಮಂಡಲದ ತ್ರಿವೇಣಿ ಸಂಗಮ ಹಾಗೂ ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿಗಳು ನಂತರ ಬ್ರಹ್ಮಗಿರಿ ಬೆಟ್ಟಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಅವರಿಂದ ಮಾಹಿತಿ ಪಡೆದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಸುಣ್ಣಬಣ್ಣ ಬಳಿಯುವುದರೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಮೆರಗು ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು ವಾಹನ ನಿಲುಗಡೆಗೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ತಲಕಾವೇರಿಯಲ್ಲಿರುವ ಕೆಎಸ್‌ಟಿಡಿಸಿಯ ಹಳೆಯ ಕಟ್ಟಡವನ್ನು ತೆರವುಗೊಳಿಸಲು ಈಗಾಗಲೇ ಆದೇಶ ನೀಡಲಾಗಿದೆ. ಆದರೆ ಇಲ್ಲಿಯವರೆಗೆ ಕಟ್ಟಡ ತೆರವು ಆಗಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಶೌಚಾಲಯ ಮತ್ತು ಬಟ್ಟೆ ಬದಲಿಸುವ ಕೋಣೆಯನ್ನು ಪರಿಶೀಲಿಸಿದರಲ್ಲದೇ ಭಾಗಮಂಡಲ ದೇವಾಲಯ ಹಾಗೂ ತ್ರಿವೇಣಿ ಸಂಗಮಕ್ಕೆ ತೆರಳಿ ಅಲ್ಲಿನ ವ್ಯವಸ್ಥೆಗಳ ಬಗ್ಗೆ ಚರ್ಚಿಸಿದರು. ಭಾಗಮಂಡಲ ದೇವಾಲಯದ ಪೌಳಿಯ ಒಳಗೆ ಮಳೆಗಾಲದಲ್ಲಿ ನೀರು ಸೋರುತ್ತಿದೆ ಎಂದು ಗಮನ ಸೆಳೆದಾಗ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕು ಮತ್ತು ತಲಕಾವೇರಿ ಕ್ಷೇತ್ರದ ಎಲ್ಲಾ ಕಡೆ ಸಿಸಿ ಕ್ಯಾಮರ ಅಳವಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಸಮಿತಿಯ ಅಧ್ಯಕ್ಷ ಬಿ.ಎಸ್.ತಮ್ಮಯ್ಯ ಮಾತನಾಡಿ, ಏ.೧೦ ರಂದು ಅಗಸ್ತೇಶ್ವರ ಪ್ರತಿಷ್ಠಾಪನೆ ಹಾಗೂ ೧೧ ರಂದು ರುದ್ರಹೋಮ ನಡೆಯಲಿದೆ ಎಂದು ತಿಳಿಸಿದರು.
ಈ ಸಂದರ್ಭ ಪಾರುಪತ್ತೆದಾರ ಕೊಂಡೀರ ಪೊನ್ನಣ್ಣ, ಭಾಗಮಂಡಲ ಗ್ರಾಮದ ಲೆಕ್ಕಪರಿಶೋಧಕ ಅಧಿಕಾರಿ, ಅರ್ಚಕರಾದ ನಾರಾಯಣ ಆಚಾರ್ ಹಾಗೂ ಶ್ರೀನಿಧಿ ಆಚಾರ್ ಹಾಜರಿದ್ದರು.

No comments

Post a Comment