✍ಕೆ.ಎಂ ಇಸ್ಮಾಯಿಲ್ ಕಂಡಕರೆ*
ದೇಶದಲ್ಲಿ ಯಾವುದೇ ಚುನಾವಣೆ ನಡೆದರೂ ಮೈಸೂರಿನ ಶಾಹಿ ಬಳಕೆ ಮಾಡಲಾಗುತ್ತಿದ್ದು ಈ ಬಾರಿಯ ಲೋಕಸಭೆ ಚುನಾವಣೆಗೂ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಯ ಶಾಹಿ ಪೂರೈಕೆಯಾಗಲಿದೆ.
ದೇಶದಲ್ಲಿ ಎಲ್ಲೇ ಚುನಾವಣೆ ನಡೆದರೂ ಮೈಲ್ಯಾಕ್ ಶಾಹಿ ಬಳಕೆಯಾಗುತ್ತದೆ. ಅಷ್ಟರ ಮಟ್ಟಿಗೆ ಮೈಲ್ಯಾಕ್ ಚುನಾವಣಾ ಆಯೋಗದ ವಿಶ್ವಾಸಗಳಿಸಿದೆ. ಈ ಬಾರಿ 7 ಹಂತಗಳಲ್ಲಿ ನಡೆಯುವ 543 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಕಳೆದ ನಾಲ್ಕು ತಿಂಗಳ ಹಿಂದೆಯೇ ಮೈಲ್ಯಾಕ್‍ಗೆ 10 ಎಂಎಲ್ ಪ್ರಮಾಣದ 26 ಲಕ್ಷ ಅಳಿಸಲಾಗದ ಶಾಯಿ ಪೂರೈಸುವಂತೆ ಚುನಾವಣಾ ಆಯೋಗ ಆರ್ಡರ್ ಬುಕ್ ಮಾಡಲಾಗಿದೆ. ಇದರಿಂದ ಮೈಲಾಕ್‍ಗೆ ಸುಮಾರು 33 ಕೋಟಿ ರೂ. ಆದಾಯ ಬರಲಿದೆ.
ಆಯೋಗದ ಬೇಡಿಕೆ ಹಾಗೂ ಸರಿಯಾದ ಸಮಯಕ್ಕೆ ಶಾಹಿ ಪೂರೈಕೆ ಮಾಡುವ ಉದ್ದೇಶದಿಂದ ಮೈಲ್ಯಾಕ್ ಸಂಸ್ಥೆ ಜ.7ರಿಂದಲೇ ಶಾಯಿ ತಯಾರಿಸುವ ಕಾರ್ಯ ಆರಂಭಿಸಿದೆ. ಚುನಾವಣಾ ದಿನಾಂಕ ಪ್ರಕಟವಾಗುವ ಮುನ್ನವೇ 20 ಲಕ್ಷ ಬಾಟಲಿ ಶಾಯಿಯನ್ನು ಹಂತ ಹಂತವಾಗಿ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದೆ. ಸಂಸ್ಥೆಯ 50 ನೌಕರರೊಂದಿಗೆ ಗುತ್ತಿಗೆ ಆಧಾರದಲ್ಲಿ ಇನ್ನೂ 50 ನೌಕರರು ಸೇರಿ ಶಾಯಿ ತಯಾರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಮಾ.19ರ ವೇಳೆಗೆ ಉಳಿಕೆ 6 ಲಕ್ಷ ಬಾಟಲಿ ಶಾಯಿಯನ್ನು ರವಾನಿಸಲಾಗುತ್ತದೆ. ಕಳೆದ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ವೇಳೆ ಒಂದು 5 ಎಂಎಲ್ ಬಾಟಲಿಗೆ 71 ರೂ., 10 ಎಂಎಲ್ ಬಾಟಲಿಗೆ 142ರೂ ದರ ನಿಗದಿ ಮಾಡಲಾಗಿತ್ತು. ಈ ಬಾರಿ ದರದಲ್ಲಿ ಗೌಪ್ಯತೆ ಕಾಯ್ದುಕೊಳ್ಳಲಾಗಿದೆ. 10 ಎಂಎಲ್ ಶಾಯಿಯಿಂದ 900 ರಿಂದ 1000 ಮತದಾರರ ಬೆರಳುಗಳಿಗೆ ಶಾಹಿ ಹಾಕಬಹುದು.
ಇವಿಎಂ, ವಿವಿ ಪ್ಯಾಟ್ ಯಂತ್ರಗಳು ಭದ್ರ: ಮೈಸೂರು ಜಿಲ್ಲೆಯ ಲೋಕಸಭಾ ಚುನಾವಣಾ ಮತಗಟ್ಟೆಗಳಿಗೆ ಒದಗಿಸುವ ಇವಿಎಂ ಮತ್ತು ವಿವಿ ಪ್ಯಾಟ್‍ಗಳನ್ನು ಮೈಸೂರಿನ ನಂಜರಾಜ ಬಹದ್ದೂರ್ ವೇರ್‍ಹೌಸ್‍ನಲ್ಲಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಸಿಸಿ ಕ್ಯಾಮರಾ ಕಣ್ಗಾವಲು ಹಾಕಲಾಗಿದ್ದು, ಬಿಇಎಲ್ ಕಂಪನಿಯಿಂದ ಮೊದಲ ಹಂತದ ಪರೀಕ್ಷೆ ನಡೆಸಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಅಣಕು ಮತದಾನದ ಮೂಲಕ ಇವಿಎಂ ಮತ್ತು ವಿವಿ ಪ್ಯಾಟ್‍ಗಳ ಕಾರ್ಯಕ್ಷಮತೆ ಪರಿಶೀಲಿಸಲು ವ್ಯವಸ್ಥೆ ಮಾಡಲಾಗಿದೆ. ಸಿಸಿ ಕ್ಯಾಮರಾಗಳ ಮೂಲಕ ಯಂತ್ರಗಳನ್ನು ವೀಕ್ಷಿಸಲು ನಂಜರಾಜ ಬಹದ್ದೂರ್ ಛತ್ರದಲ್ಲಿ ಕಂಪ್ಯೂಟರ್ ಕೇಂದ್ರ ತೆರೆದಿದ್ದು ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಗೋದಾಮಿಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

No comments
Post a Comment