ಮಡಿಕೇರಿಯಲ್ಲಿ ವಿಶ್ವ ಜಲ ದಿನಾಚರಣೆ

No comments

ಮಳೆ ನೀರು ಸಂಗ್ರಹಣೆಗೆ ಒತ್ತು ನೀಡಿ : ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಕರೆ
ಮಡಿಕೇರಿ ಮಾ.೨೯ : ಪ್ರತಿಯೊಂದು ದಿನಾಚರಣೆಗೂ ಕೂಡ ತನ್ನದೆ ಆದ ಇತಿಹಾಸವಿದೆ. ಅದರಂತೆ ಇಂದು ವಿಶ್ವ ಜಲ ದಿನವೆಂದು ಆಚರಿಸಲಾಗುತ್ತದೆ. ನೀರಿನ ಕೊರತೆಯು ಕರಾವಳಿಯಿಂದ-ಕಾವೇರಿ ನಾಡಿನಲ್ಲಿಯು ಈ ಭೀತಿ ಕಾಣುತ್ತಿದೆ. ಬಯಲು ಸೀಮೆಯ ಜನರು ತೀವ್ರ ಬರಗಾಲವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಇಂದಿನ ನಗರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಣೆಗೆ ಇಂಗುಗುಂಡಿಗಳನ್ನು ನಿರ್ಮಿಸುವ ಮೂಲಕ ನೀರು ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅರಣ್ಯ ರಕ್ಷಣೆಯಿಂದ ನೀರಿನ ಸಂರಕ್ಷಣೆ ಮಾಡಲು ಸಾಧ್ಯ. ನೀರಿನ ಸದ್ಬಳಕೆ ಮತ್ತು ಮರು ಬಳಕೆಯನ್ನು ಮಾಡುವ ಮೂಲಕ ಇಂದಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಜನಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ. ಈ ಮೂಲಕ ಮುಂದಿನ ಭವಿಷ್ಯಕ್ಕೆ ನೀರಿನ ಸಂರಕ್ಷಣೆಯನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಅವರು ಮಾತನಾಡಿ ಕಾವೇರಿ ನಾಡಿಗೆ ಬರಗಾಲ ಬಂದಿದೆ. ಜಿಲ್ಲೆಯ ಹಾರಂಗಿ, ಕಣಿವೆ, ತಲಕಾವೇರಿ ಮುಂತಾದ ಸ್ಥಳಗಳಲ್ಲಿ ನೀರಿನ ಗುಣಮಟ್ಟದ ಅಧ್ಯಯನ ನಡೆಸಿದ್ದು, ನೀರಿನ ಕೊರತೆ ಹಾಗೂ ಕಲುಷಿತಗೊಂಡಿರುವುದು ದೃಡಪಟ್ಟಿದೆ. ಆದ್ದರಿಂದ ಚರಂಡಿ ಕಲುಷಿತ ನೀರು ಹಾಗೂ ಪ್ಲಾಷ್ಟಿಕ್, ತ್ಯಾಜ್ಯ ವಸ್ತುಗಳನ್ನು ನದಿಗೆ ಹರಿಯ ಬಿಡುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಮುಂದಿನ ಪೀಳಿಗೆಗೆ ನೀರಿನ ಸಂರಕ್ಷಣೆಯು ಅಗತ್ಯವಾಗಿದೆ. ಇಂದು ನೀರಿನ ಹಿತ-ಮಿತ ಬಳಕೆ ಮಾಡಬೇಕಿದೆ. ದಿನನಿತ್ಯದ ಜೀವನದಲ್ಲಿ ನೀರಿನ ಬಳಕೆಯ ಅಂಕಿ ಅಂಶವನ್ನು ಮಾಡಿಕೊಂಡು ಭವಿಷ್ಯಕ್ಕೆ ನೀರನ್ನು ಉಳಿಸುವಲ್ಲಿ ಇಂದಿನ ಯುವಜನತೆ ಶ್ರಮಿಸಬೇಕು ಎಂದರು.
ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಜಿ.ಶ್ರೀನಾಥ್ ಅವರು ಮಾತನಾಡಿ ತ್ಯಾಜ್ಯ ವಸ್ತುಗಳನ್ನು ನದಿ ನೀರಿಗೆ ಹರಿಯ ಬಿಡುವುದರಿಂದ ಹಲವಾರು ನದಿ-ತೊರೆಗಳು ಕಲುಷಿತಗೊಂಡಿದೆ. ಇದನ್ನು ತಡೆಗಟ್ಟಬೇಕು. ಅಂತರ್ಜಲದ ನೀರಿನ ಮಟ್ಟ ಕುಸಿದಿದ್ದು ಕೊಳವೆ ಬಾವಿಗಳ ನಿರ್ಮಾಣ ಕಡಿಮೆಗೊಳಿಸಬೇಕು. ನೀರಿನ ಅನವಶ್ಯಕ ಬಳಕೆಯನ್ನು ಕಡಿಮೆ ಮಾಡಲು ಜಾಗೃತಿ ವಹಿಸಬೇಕು ಎಂದು ಅವರು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ. ಚಿತ್ರಾ ಅವರು ಮಾತನಾಡಿ ನೀರು ಸಕಲ ಜೀವಜಂತುಗಳ ಮೂಲಾಧಾರವಾಗಿದ್ದು, ನೀರನ್ನು ಹೊಸದಾಗಿ ಆವಿಷ್ಕಾರ ಮಾಡಲು ಅಸಾಧ್ಯ. ಆದ್ದರಿಂದ ಇರುವ ನೀರಿನ ಮೂಲಗಳನ್ನು ರಕ್ಷಿಸಲು ಪ್ರತಿಯೊಬ್ಬ ಪ್ರಜೆಯು ನೀರಿನ ಸಂರಕ್ಷಣೆ ಮಾಡುವುದು ಮೂಲಭೂತ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಸಂಚಾಲಕರಾದ ಟಿ.ಜಿ.ಪ್ರೇಮ್‌ಕುಮಾರ್ ಅವರು ಪರಿಸರ ಸಂರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿದರು. ಪರಿಸರ ಸಂರಕ್ಷಣೆಯ ಕುರಿತು ನಡೆಸಲಾದ ಪ್ರಬಂಧ ಹಾಗೂ ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಪರಿಸರ ಸಂರಕ್ಷಣೆಯ ಕುರಿತು ದೃಶ್ಯ ಪ್ರದರ್ಶನ ಏರ್ಪಡಿಸಲಾಯಿತು.
ರಾಜ್ಯ ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್, ಸ್ಕೌಟ್ ಅಂಡ್ ಗೈಡ್ಸ್‌ನ ಜಿಲ್ಲಾಧ್ಯಕ್ಷರಾದ ಜಿಮ್ಮಿ ಸಿಕ್ವೇರಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಪ್ರೊ.ಬಿ.ಆರ್.ಶಶಿದರ್, ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷರಾದ ಕೆ.ಟಿ.ಬೇಬಿ ಮ್ಯಾಥ್ಯೂ ಹಾಗೂ ವಿವಿಧ ವಿಭಾಗದ ಅಧ್ಯಾಪಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಪ್ರೊ. ಬಿ.ಆರ್.ಶಶಿದರ್ ಸ್ವಾಗತಿಸಿದರು, ಬಿ.ಜಯಪ್ಪ ವಂದಿಸಿದರು.

No comments

Post a Comment