ತಂದೆಯ ಟೀಶರ್ಟಿನೊಳಗೆ ಪ್ರಾಣಬಿಟ್ಟ ಮಗಳು: ನಿರಾಶ್ರಿತ ಪಲಾಯನದ ಕರುಳು ಹಿಂಡುವ ದುರಂತ ಚಿತ್ರ

No comments


  • ಮೆಕ್ಸಿಕೊ ಸಿಟಿ: ಅನಧಿಕೃತ ನಿರಾಶ್ರಿತರ ವಲಸೆಯನ್ನು ತಡೆಯಲು ಅಮೆರಿಕ ಬಿಗಿ ಕ್ರಮ ಕೈಗೊಳ್ಳುತ್ತಿದ್ದು ಈ ನಡುವೆ ಹೃದಯ ಭೇದಕವಾದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಮೆಕ್ಸಿಕೊ ಅಮೆರಿಕ ಗಡಿಯಲ್ಲಿ ಅಮೆರಿಕ ನಿಯಂತ್ರಣವನ್ನು ಹೊಂದಿದ ರಿಯೊ ಗ್ರಾಂಡ್ ನದಿಯಲ್ಲಿ ಸಾಲ್ವಡೋರಿನ ವ್ಯಕ್ತಿ ಮತ್ತು ಅವರ ಎರಡು ವರ್ಷಗಳ ಪುತ್ರಿಯ ಮೃತದೇಹ ತೇಲಾಡುತ್ತಿರುವ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಆಸ್ಕರ್ ಅಲ್ಬರ್ಟ್ ಮತ್ತು ಅವರ ಪುತ್ರಿ ವಲೇರಿಯ ಮೃತಪಟ್ಟವರಾಗಿದ್ದು ಸೋಮವಾರ ಇವರ ಮೃತದೇಹ ಪತ್ತೆಯಾಗಿದ್ದು ಮೆಕ್ಸಿಕೊದ ಪತ್ರಿಕೆಯಲ್ಲಿ ಚಿತ್ರ ಪ್ರಕಟವಾಗಿತ್ತು. ನದಿಯಲ್ಲಿ ಇಬ್ಬರ ಮೃತದೇಹಗಳು ಬೋರಲಾಗಿ ಬಿದ್ದುಕೊಂಡಿತ್ತು. ತಂದೆಯ ಟೀಶರ್ಟಿನೊಳಗೆ ಪುಟ್ಟ ಬಾಲಕಿ ತೂರಿಕೊಂಡ ಸ್ಥಿತಿಯಲ್ಲಿ ಮೃತದೇಹವಿದೆ. ಎಷ್ಟು ಅಪಾಯಕಾರಿ ದಾರಿಯ ಮೂಲಕ ಸುರಕ್ಷಿತ ಸ್ಥಳವನ್ನು ಹುಡುಕಿ ಇವರೆಲ್ಲ ಅಮೆರಿಕಕ್ಕೆ ಬರಲು ಯತ್ನಿಸುತ್ತಿದ್ದಾರೆ ಎನ್ನುವ ದಾರುಣ ಅವಸ್ಥೆಯನ್ನು ಈ ಚಿತ್ರ ಬಹಿರಂಗಗೊಳಿಸುತ್ತಿದೆ. ಪುತ್ರಿಯನ್ನು ಕರೆದುಕೊಂಡು ನದಿ ಈಜಿ ದಾಟಲು ಆಸ್ಕರ್ ಆಲ್ಬರ್ಟ್ ಯತ್ನಿಸಿದ್ದರು. ನದಿಯ ಬದಿ ಮಗಳನ್ನು ನಿಲ್ಲಿಸಿ ಪತ್ನಿಯನ್ನು ಕರೆದುಕೊಂಡು ಹೋಗಲು ಆಸ್ಕರ್ ಮರಳಿ ಈಜುತ್ತಿದ್ದರು ಎಂದು ಅವರ ತಾಯಿ ಹೇಳಿದರು. ಈ ನಡುವೆ ನದಿಗೆ ಬಿದ್ದ ವಲೇರಿಯಳನ್ನು ಮೇಲೆ ತರಲು ಆಲ್ಬರ್ಟ್‍ಗೆ ಸಾಧ್ಯವಾಗಲಿಲ್ಲ. ವಲೇರಿಯ ನೀರಿನ ಸುಳಿಗೆ ಸಿಕ್ಕಿ ಆಳಕ್ಕೆ ಹೋಗಿದ್ದಳು. ಮಗಳನ್ನು ರಕ್ಷಿಸಲು ಯತ್ನಿಸುವ ವೇಳೆ ಇಬ್ಬರೂ ಸುಳಿಯಲ್ಲಿ ಸಿಕ್ಕಿ ಮೃತಪಟ್ಟಿದ್ದರು. ಐಲನ್ ಕುರ್ದಿ ಎಂಬ ಮೂರು ವರ್ಷದ ಬಾಲಕ ಸಮುದ್ರ ಬದಿಯಲ್ಲಿ ಬೋರಲಾಗಿ ಬಿದ್ದ ಚಿತ್ರ ಈ ಹಿಂದೆ ಜಗತ್ತಿನಾದ್ಯಂತ ಕಂಪನ ಸೃಷ್ಟಿಸಿತ್ತು. ಆಲ್ಬರ್ಟ್ ಮತ್ತು ವಲೇರಿಯಾಳ ಚಿತ್ರ ಇದೇ ಅನುಭವವನ್ನು ನೆನಪಿಸುತ್ತಿದೆ. ಈ ಘಟನೆಯ ಫೋಟೋವನ್ನು ಜೂಲಿಯ ಲೆ ಡ್ಯೂಕ್ ತೆಗೆದಿದ್ದಾರೆ. 

No comments

Post a Comment