ತುರ್ತು ಸಂದರ್ಭಗಳಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಕಾರ ಅಗತ್ಯ 


ಮಡಿಕೇರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ವತಿಯಿಂದ ಯುನಿಸೆಫ್‍ನ ಸಹಯೋಗದೊಂದಿಗೆ ‘ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಎದುರಿಸಬೇಕಾದ ಸವಾಲುಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು’ ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಒಂದು ದಿನದ ಕಾರ್ಯಾಗಾರವು ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕಾರ್ಯಗಾರಕ್ಕೆ ಚಾಲನೆ ನೀಡಿ

ಮಾತನಾಡಿ ಕಳೆದ ಬಾರಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಸಾಕಷ್ಟು ನಷ್ಟ ಉಂಟಾಗಿತ್ತು. ಆ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸರ್ಕಾರೇತರ ಸಂಸ್ಥೆಗಳು ಸಹ ಕೈಜೋಡಿಸಿ ಎಲ್ಲಾ ರೀತಿಯ ಸಹಕಾರ ನೀಡಿದ್ದರು ಎಂದು ಅವರು ಹೇಳಿದರು. ಈ ಬಾರಿಯ ಮಳೆಗಾಲವನ್ನು ಎದುರಿಸಲು ಜಿಲ್ಲಾಡಳಿತವು ಈಗಾಗಲೇ ಸನ್ನದ್ಧವಾಗಿದೆ. ಆ ನಿಟ್ಟಿನಲ್ಲಿ ತೀವ್ರ ಅತಿವೃಷ್ಟಿಯಿಂದ ಪ್ರಕೃತಿ ವಿಕೋಪದ ತುರ್ತು ಸಂದರ್ಭವನ್ನು ನಿಬಾಯಿಸಲು ಜಿಲ್ಲಾಡಳಿತದೊಂದಿಗೆ ಎನ್‍ಜಿಒಗಳು ಸಹಕಾರ ಅಗತ್ಯ ಎಂದರು. ಜಿಲ್ಲೆಯಲ್ಲಿ 32 ಸೂಕ್ಷ್ಮ ಪ್ರದೇಶಗಳನ್ನು ಈಗಾಗಲೇ ಗುರುತಿಸಿದ್ದು, ಮುನ್ನೆಚ್ಚರಿಕೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಆ ಪ್ರದೇಶಗಳನ್ನು ಭೇಟಿ ಮಾಡಿ ಪರಿಶೀಲಿಸಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಅದರೊಂದಿಗೆ ಎನ್‍ಜಿಒಗಳು ಕೂಡ ಜಿಲ್ಲಾಡಳಿತದೊಂದಿಗೆ ಸಹಕರಿಸುವ ಮೂಲಕ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಇಂದಿನ ಕಾರ್ಯಾಗಾರದಲ್ಲಿ ಸೂಕ್ತ ಮಾಹಿತಿಯನ್ನು ಪಡೆದುಕೊಂಡು ಹಾಗೂ ಸಲಹೆಗಳಿದ್ದಲ್ಲಿ ಚರ್ಚಿಸುವ ಮೂಲಕ ಪ್ರಕೃತಿ ವಿಕೋಪದ ನಿರ್ವಹಣೆಗೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಮಾತನಾಡಿ ಪ್ರಕೃತಿ ವಿಕೋಪವನ್ನು ನಿಭಾಯಿಸಲು ಗ್ರಾಮಸ್ಥರ ಸಂಘ ಸಂಸ್ಥೆಗಳು ಹಾಗೂ ಎನ್‍ಜಿಒಗಳ ಪಾತ್ರ ಪ್ರಮುಖವಾಗಿದೆ. ಆದ್ದರಿಂದ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‍ನೊಂದಿಗೆ ಎನ್‍ಜಿಒಗಳ ಸಹಕಾರ ಅಗತ್ಯವಿದೆ ಎಂದರು. ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು ಅವರು ಮಾತನಾಡಿ ಈ ಬಾರಿಯ ಪ್ರಕೃತಿ ವಿಕೋಪದ ಮುನ್ನೆಚರಿಕೆಯ ಕ್ರಮವಾಗಿ ಜಿಲ್ಲಾಡಳಿತವು ಸಾಕಷ್ಟು ಕಾರ್ಯಯೋಜನೆ ಮಾಡಿಕೊಂಡಿದೆ. ಜನರು ಸುಳ್ಳು ಸುದ್ದಿಗಳಿಗೆ ಭಯಭೀತರಾಗದೆ ಜಿಲ್ಲಾಡಳಿತ ಸೂಚಿಸಿದ ಸುದ್ದಿಗಳನ್ನು ಗಣನೆಗೆ ತೆಗೆದುಕೊಂಡು ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ಮಾಡಿದರು. ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು ಜಿಲ್ಲಾಡಳಿತದೊಂದಿಗೆ ಸರ್ಕಾರೇತರ ಸಂಘ ಸಂಸ್ಥೆಗಳ ಸಹಕಾರ ಅತೀ ಅಗತ್ಯವಾಗಿದೆ ಎಂದು ಅವರು ಕರೆ ನೀಡಿದರು. ಜಿಲ್ಲೆಯಲ್ಲಿ ನಿರಂತರವಾಗಿ 24*7 ಜಿಲ್ಲಾ ಕಂಟ್ರೋಲ್ ರೂಮ್‍ನ್ನು ತುರ್ತು ಸೇವೆಗಾಗಿ ನಿಯೋಜಿಸಲಾಗಿದೆ. ತಾಲ್ಲೂಕು ಮಟ್ಟದಲ್ಲಿನ ನಿಯಂತ್ರಣ ಕೊಠಡಿ, ಅತೀ ವೇಗದ ಸುದ್ದಿ ಪ್ರಸರಣಕ್ಕೆ ಉನ್ನತ ಮಟ್ಟದ ಅಧಿಕಾರಿಗಳ ವಾಟ್ಸಾಪ್ ಗುಂಪು, ಸೂಕ್ಷ್ಮ ವಿಶ್ಲೇಷಣಾ ತಂಡ, ಅಧಿಕೃತ ಜಿಲ್ಲಾ ವೆಬ್‍ಸೈಟ್, ಪರಿಹಾರ ಕೇಂದ್ರಗಳ ನಿರ್ಮಾಣ ಸಮಿತಿ, ಪ್ರಥಮ ಚಿಕಿತ್ಸೆ ಸಮಿತಿ, ಆಹಾರ ವಿತರಣೆ ಹಾಗೂ ಶುಚಿತ್ವ ಸಮಿತಿ, ಪಡಿತರ ಸಾಮಗ್ರಿ ವಿತರಣಾ ಸಮಿತಿ, ಜಾನುವಾರು ರಕ್ಷಣೆ ಹಾಗೂ ಮೃತದೇಹ ನಿರ್ವಹಣಾ ಸಮಿತಿ, ಆಸ್ತಿ ಮೌಲ್ಯಮಾಪನ ಹಾಗೂ ಪರಿಶೀಲನಾ ಸಮಿತಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಯುನಿಸೆಫ್‍ನ ಜಿಲ್ಲಾ ಸಮಾಲೋಚಕರಾದ ಪ್ರಭಾತ್ ಕಲ್ಕೋರ ಅವರು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಎದುರಿಸಬೇಕಾದ ಸವಾಲುಗಳು ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರೇತರ ಸಂಘ ಸಂಸ್ಥೆಗಳಿಗೆ ಉಪನ್ಯಾಸ ನೀಡಿದರು. ವಿವಿಧ ಸರ್ಕಾರೇತರ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು ಹಲವು ಮಾಹಿತಿಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಮಂಗಳೂರು ವಿಶ್ವವಿದ್ಯಾನಿಲಯ ಮಂಗಳಗಂಗೋತ್ರಿ ಎನ್‍ಎಸ್‍ಎಸ್‍ನ ನಿರ್ದೇಶಕರಾದ ವಿನಿತ, ಹ್ಯೂಮ್ಯಾನಿಟಿ ಇಂಡಿಯಾ ದಕ್ಷಿಣದ ಅಧ್ಯಕ್ಷ ಮಹಮ್ಮದ್ ಷರಿಫ್, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಾದೇಟಿರ ಬೆಳ್ಯಪ್ಪ, ರೆಡ್‍ಕ್ರಾಸ್ ಸಂಸ್ಥೆ ರವೀಂದ್ರ ರೈ ಹಾಗೂ ಇನ್ನಿತರ ಎನ್‍ಜಿಒಗಳ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.