ಉತ್ತಮ ಪರಿಸರ ಹಾಗೂ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ: ಅಪ್ಪಚ್ಚು ರಂಜನ್ 

No comments

ಮಡಿಕೇರಿ: ಹಸಿ ಮತ್ತು ಒಣಕಸ ಬೇರ್ಪಡಿಸಿ ಗ್ರಾಮದ ಸ್ವಚ್ಚತೆಗೆ ಸಹಕರಿಸುವಂತೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಕರೆ ನೀಡಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗ್ರಾಮೀಣ ಸ್ವಚ್ಛ ಭಾರತ ಅಭಿಯಾನ ವತಿಯಿಂದ ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಂಗಳವಾರ ನಡೆದ ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಜನ ಜಾಗೃತಿ’ ಕಾರ್ಯಕ್ರಮದಲ್ಲಿ ಭಿತ್ತಿಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು. ಒಣ ಕಸವಾದ ತ್ಯಾಜ್ಯ ಕಾಗದ, ಗಾಜಿನ ಬಾಟಲು, ಪ್ಲಾಷ್ಟಿಕ್ ಚೀಲ, ಟೆಟ್ರಾ ಪ್ಯಾಕ್, ಲೋಹದ ಕ್ಯಾನುಗಳು, ಹಾಗೆಯೇ ಹಸಿ ಕಸವಾದ ಮನೆಯ ತ್ಯಾಜ್ಯ, ತೆಂಗಿನ ಚಿಪ್ಪು, ಹೂ ಗಳು, ಒಡೆದ ಮೊಟ್ಟೆ ಚಿಪ್ಪು, ಎಲೆಗಳು ಮತ್ತಿತರವನ್ನು ವಿಂಗಡಿಸಿ ಕಸವನ್ನು ಎರೆ ಹುಳು ಗೊಬ್ಬರವನ್ನಾಗಿ ಮಾಡಬೇಕು ಎಂದರು. ಉತ್ತಮ ಪರಿಸರ ಹಾಗೂ ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಸ್ವಚ್ಛತೆ ಇದ್ದಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಕಸ ಮತ್ತು ಪ್ಲಾಸ್ಟಿಕ್‍ನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸದ ತೊಟ್ಟಿಗಳಲ್ಲಿ ಹಾಕಬೇಕು. ಗಿಡಮರಗಳನ್ನು ಹೆಚ್ಚು ಬೆಳೆಸಬೇಕು ಎಂದು ಅವರು ಕರೆ ನೀಡಿದರು. ನಮ್ಮ ಮನಸ್ಸನ್ನು ಸ್ವಚ್ಛವಾಗಿಟ್ಟುಕೊಂಡರೆ ಇತರರ ಮನಸ್ಸನ್ನು ಸ್ವಚ್ಛತೆಯಿಂದ ಕಾಣಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಎಲ್ಲರೂ ಕೈಜೋಡಿಸುವಂತಾಗಬೇಕು ಎಂದರು. ಹಸಿ ಕಸ ಮತ್ತು ಒಣ ಕಸವನ್ನು ಬೇರ್ಪಡಿಸಿ ಎರೆಹುಳು ಗೊಬ್ಬರ ಮಾಡಬೇಕು. ಕುಶಾಲನಗರದಲ್ಲಿ ಪ್ರವಾಸಿಗರಿಗೆ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಮಾಹಿತಿ ನೀಡುವಂತಾಗಬೇಕು ಎಂದು ಅವರು ಸಲಹೆ ಮಾಡಿದರು. ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣೆ ಬಳಿ ಗೃಹ ಮಂಡಳಿಗೆ ಜಾಗ ನೀಡಿದವರು ಯಾರು, ಹಾಗೆಯೇ 800 ಮರಗಳ ಹನನಕ್ಕೆ ಅನುಮತಿ ಕೊಟ್ಟವರಾರು ಎಂದು ಶಾಸಕರು ಪ್ರಶ್ನಿಸಿದರು. ಆದರೆ ಯಾರೋ ಮಾಡಿದ ತಪ್ಪಿನಿಂದ ಇನ್ನೊಬ್ಬರ ಮೇಲೆ ಕೆಸರು ಎರಚುವ ಕೆಲಸ ಮಾಡಬಾರದು ಎಂದು ಅವರು ಹೇಳಿದರು. ಅಮೇರಿಕಾ, ಸಿಂಗಾಪುರ, ದುಬೈನಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವಂತಿಲ್ಲ. ಅಷ್ಟರ ಮಟ್ಟಿಗೆ ಶುಚಿಯಾಗಿರುತ್ತದೆ. ಆದರೆ ಆ ದೇಶಗಳಿಂದ ಭಾರತಕ್ಕೆ ಇಳಿದ ತಕ್ಷಣ ಎಲ್ಲವೂ ಮಾಯವಾಗುತ್ತದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಜಿ.ಪಂ.ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಮಾತನಾಡಿ ಪ್ರತಿಯೊಬ್ಬರ ಮನೆಯಲ್ಲಿಯೂ ಶೌಚಾಲಯ ಕಡ್ಡಾಯವಾಗಿ ಇರಬೇಕು ಮತ್ತು ಬಳಕೆ ಮಾಡಬೇಕು. ಛತ್ತೀಸ್‍ಘಢ ರಾಜ್ಯದಲ್ಲಿ ಪ್ರತಿಯೊಂದು ಪುಟ್ಟ ಮನೆಯಲ್ಲಿಯೂ ಶೌಚಾಲಯ ಇರುವುದನ್ನು ಕಾಣಬಹುದಾಗಿದೆ ಎಂದರು. ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪೋಷಕರು ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಪರಿಸರ ಶುಚಿಯಾಗಿ ಇಟ್ಟುಕೊಂಡಿರಬೇಕು. ನಾವು ತಿನ್ನುವ ಆಹಾರವನ್ನು ಬಿಸಾಡಬಾರದು. ಪರಿಸರ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಮಾಜಕ್ಕೆ ಒಳಿತು ಮಾಡುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಮಾಡಬೇಕು ಎಂದರು. ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಜನಜಾಗೃತಿ ಸಂಬಂಧಿಸಿದಂತೆ ಸ್ಲೈಡ್ ಶೋ ಮೂಲಕ ಮಾಹಿತಿ ನೀಡುವಂತೆ ಲೋಕೇಶ್ವರಿ ಗೋಪಾಲ್ ಅವರು ಸಲಹೆ ಮಾಡಿದರು. ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಮಾತನಾಡಿ ಸ್ವಚ್ಛ ಮೇವ ಜಯತೇ ಆಂದೋಲನವು ಜಿಲ್ಲೆಯ 104 ಗ್ರಾಮ ಪಂಚಾಯತ್‍ಗಳಲ್ಲಿ ಒಂದು ತಿಂಗಳ ಕಾಲ ಗ್ರಾಮಸ್ಥರ ಸಹಕಾರದಲ್ಲಿ ಜನ ಜಾಗೃತಿ ಹಾಗೂ ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವುದರ ಮೂಲಕ ನಡೆಯಲಿದೆ ಎಂದರು. ಗ್ರಾಮೀಣ ಸಮುದಾಯಕ್ಕೆ ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಹಾಗೂ ನಿರ್ವಹಣೆ ಮಾಡುವ ಬಗ್ಗೆ ಮಾಹಿತಿ ನೀಡುವುದು, ವೈಯಕ್ತಿಕ ಸಮುದಾಯ ಮತ್ತು ಸಾಂಸ್ಥಿಕ ಶೌಚಾಲಯಗಳ ನಿರ್ವಹಣೆ ಮಾಡುವ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ನೀಡುವುದು, ಜಲಾಮೃತ ಹಾಗೂ ಪರಿಸರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಪರಿಸರ ಸಂರಕ್ಷಣೆ ಕುರಿತು ಕಾರ್ಯಕ್ರಮ ಹಮ್ಮಿಕೊಂಡು ಶಾಲೆ, ಅಂಗನವಾಡಿ, ಸರ್ಕಾರಿ ಜಾಗದಲ್ಲಿ ಹಾಗೂ ನರೇಗಾ ಯೋಜನೆಯಡಿಯಲ್ಲಿ ಗಿಡ ನಡುವ ಕಾರ್ಯಕ್ರಮ ಹಮ್ಮಿಕೊಳ್ಳುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು. ಈ ಕಾರ್ಯಕ್ರಮಗಳಿಗೆ ಪೂರಕವಾಗಿ ಒಂದು ತಿಂಗಳು ಪೂರ್ತಿಯಾಗಿ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರ್ಯಕ್ರಮಗಳು ಹಮ್ಮಿಕೊಳ್ಳುವ ಮೂಲಕ ಜಾಗೃತಿ ನೀಡಲಾಗುತ್ತಿದೆ. ಜಿಲ್ಲೆಯ ಮೂರು ತಾಲ್ಲೂಕಿನಲ್ಲಿ ಸ್ವಚ್ಛತಾ ರಥದ ಚಾಲನೆ ಮಾಡಿ ಜನ ಜಾಗೃತಿ ಮೂಡಿಸಲಿದೆ ಎಂದು ಜಿ.ಪಂ.ಸಿಇಒ ಅವರು ಹೇಳಿದರು. ‘ಜಲ ಸಂರಕ್ಷಣ ಹಾಗೂ ಪರಿಸರ ಸಂರಕ್ಷಣೆ ಅಂಗವಾಗಿ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ 500 ರಿಂದ 1500 ಸಸಿಗಳನ್ನು ನೆಟ್ಟು ಪೋಷಿಸುವಂತೆ ಸ್ವಚ್ಛ ಮೇವ ಜಯತೆ ಹಾಗೂ ಜಲಾಮೃತ ಜನಾಂದೋಲನ ಜನಜಾಗೃತಿ ಅಂಗವಾಗಿ ಒಂದು ಲಕ್ಷ ಗಿಡಗಳನ್ನು ನೆಡಲಾಗುತ್ತದೆ. ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಶಾಲೆಗಳಲ್ಲಿ, ಗ್ರಾ.ಪಂ.ಗಳು ಹಾಗೂ ಕಚೇರಿಗಳಲ್ಲಿ ಗೋಡೆ ಬರಹ ಬರೆಸಲಾಗುತ್ತದೆ ಎಂದರು.’

No comments

Post a Comment